ಪ್ರಗತಿವಾಹಿನಿ ಸುದ್ದಿ, ಗೋಕಾಕ
ನಗರದಲ್ಲಿ ನಡೆಯುತ್ತಿರುವ ೨೪/೭ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಳಪೆಯಾಗಿದೆ. ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಜೈನ್ ಇರಿಗೇಶನ್ ಕಂಪನಿ ವಿಫಲವಾಗಿದೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಪತ್ರಕರ್ತರೊಂದಿಗೆ ಮಾತನಾಡುತ್ತ, ಕಳೆದ ಹಲವಾರು ವರ್ಷಗಳಿಂದ ನಗರಸಭೆ ಗೋಕಾಕ ನಗರದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತ ಬಂದಿದೆ. ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಜನತೆಗೆ ನಿರಂತರ ನೀರು ಸೌಲಭ್ಯ ನೀಡುವ ಹಿತದೃಷ್ಟಿಯಿಂದ ೨೪/೭ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದಾರೆ. ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದ ಜೈನ್ ಇರಿಗೇಶನ್ ಕಂಪನಿಯವರು ಸುಮಾರು 4 ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಮಾಡುತ್ತಿರುವುದಲ್ಲದೆ, ಜನರಿಗೆ ನಿರಂತರ ನೀರು ಒದಗಿಸಲು ವಿಫಲರಾಗಿದ್ದಾರೆ. 4 ಜೋನ್ ಗಳಲ್ಲಿ ಶೇ.50ರಷ್ಟು ಕಾಮಗಾರಿಯಾಗಿದ್ದು ಮನೆಗಳಿಗೆ ಜೋಡಣೆಯಾದ ನಲ್ಲಿಗಳಲ್ಲಿ ಮಣ್ಣು ಮಿಶ್ರಿತ ನೀರು ಸರಬಾರು ಆಗುತ್ತಿದೆ ಎಂದರು.
ಈ ಕಾಮಗಾರಿಯು ಅವೈಜ್ಞಾನಿಕವಾಗಿರುವುದರಿಂದ ಪೈಪ್ಗಳಲ್ಲಿ ಗಾಳಿ ತುಂಬಿ ಮನೆಗಳಿಗೆ ಜೋಡಿಸಿದ ನಲ್ಲಿಗಳಲ್ಲಿ ಗಾಳಿ ಪ್ರೆಷರ್ನಿಂದ ನೀರು ಬಾರದೆ ಮೀಟರ್ ಗಳು ಸತತವಾಗಿ ತಿರುಗುತ್ತಿವೆ. ಹೀಗಾಗಿ ನೀರಿನ ಕರ ಮಾಸಿಕವಾಗಿ ಸಾವಿರಕ್ಕೂ ಹೆಚ್ಚು ಮೊತ್ತದ ಬಿಲ್ಲು ಬರುತ್ತಿದ್ದು ಸಾರ್ವಜನಿಕರು ನೀರಿನ ಕರ ತುಂಬಲು ಹಿಂದೇಟು ಹಾಕುತ್ತಿದ್ದಾರೆ. ನೀರಿನ ಕರದ ಹೆಸರಿನಲ್ಲಿ ಸಾರ್ವಜನಿಕರಿಂದ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಹಣ ವಸೂಲಿಗಿಳಿದಿದ್ದಾರೆಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಅವೈಜ್ಞಾನಿಕವಾಗಿ ಕೂಡಿದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಈ ಕೂಡಲೆ ಜೈನ್ ಇರಿಗೇಶನ್ ಕಂಪನಿಯಿಂದ ನಗರಸಭೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಜೈನ್ ಇರಿಗೇಶನ್ ಕಂಪನಿ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ