ಪ್ರಗತಿವಾಹಿನಿ ಸುದ್ದಿ, ನೇಗಿನಹಾಳ:
ಕಿತ್ತೂರು ಚನ್ನಮ್ಮನ ಗತ ವೈಭವ ಮರುಕಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಕೆನರಾ ಕ್ಷೇತ್ರದ ಸಮ್ಮಿಶ್ರ ಪಕ್ಷದ ಅಧಿಕೃತ ಅಭ್ಯರ್ಥಿ ಆನಂದ ಅಸ್ನೋಟಿಕರ ಹೇಳಿದರು.
ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ ಅವರ ಮನೆಯಲ್ಲಿ ಚುನಾವಣೆ ಪ್ರಚಾರ ಉದ್ದೇಶಿಸಿ ಮಾತನಾಡಿ, ಅನಂತಕುಮಾರ ಹೆಗಡೆಯವರು ೧ನೆಯ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, ೨ನೆಯ ಬಾರಿ ಚಿತ್ತರಂಜನ ಹತ್ಯೆ, ೩ನೆಯ ಬಾರಿ ವಾಜಪೇಯ ಅಲೆ, ೪ನೆಯ ಬಾರಿ ಕುಮಾರ ಬಂಗಾರಪ್ಪ ಗಾಳಿ, ೫ನೆಯ ಬಾರಿ ಮೋದಿ ಹೆಸರಲ್ಲಿ ಆಯ್ಕೆಯಾಗಿದ್ದಾರೆ ಹೊರತು ತಮ್ಮ ಸ್ವ-ಪ್ರತಿಷ್ಠೆಯ ಮೇಲೆ ಆಯ್ಕೆಯಾಗಿಲ್ಲ ಎಂದು ವ್ಯಂಗ್ಯವಾಡಿದರು. ಈ ಬಾರಿಯೂ ಸಹ ಮೋದಿಯವರಿಗೆ ಮತ ನೀಡಿ ಎಂದು ಮತ ಯಾಚಿಸುತ್ತಿದ್ದಾರೆ ಹೊರತು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.
ಐದು ಬಾರಿ ಆಯ್ಕೆಯಾದರೂ ಕ್ಷೇತ್ರದಲ್ಲಿ ಕೆಲಸ ಮಾತ್ರ ಶೂನ್ಯವಾಗಿದೆ. ಹಿಂದುತ್ವ, ಕೋಮುಗಲಭೆ, ಅಸಂಬದ್ದವಾದ ಮಾತಗಳನ್ನು ಆಡುತ್ತ ಬಂದವರು. ಇಂತ ಮಾತುಗಳೆ ಅವರ ಬಂಡವಾಳ ನೀವು ಮತ ಹಾಕುವ ಹಕ್ಕು ಪಡೆದಿದ್ದೀರಿ, ನನಗೆ ಸಮಾಜ ಸೇವೆ ಮಾಡುವ ನಿಯಮವಿಲ್ಲ, ನಾನು ರಾಜಕಾರಣ ಮಾಡುವುದಕ್ಕೆ ಸಂಸದನಾಗಿದ್ದೇನೆ. ಅಭಿವೃದ್ಧಿ ತನ್ನಷ್ಟಕ್ಕೆ ತಾನೆ ಆಗುತ್ತದೆ ಎಂದು ಉಡಾಪೆ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.
ಕಿತ್ತೂರಿನ ಕೋಟೆ, ಎಂ.ಕೆ.ಹುಬ್ಬಳ್ಳಿಯ ಗಂಗಾಬಿಕಾ ಕ್ಷೇತ್ರ ಹಾಗು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಹಲವಾರು ಗ್ರಾಮಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿ ಉತ್ತಮ ಪ್ರವಾಸಿ ತಾಣ ಮಾಡಲು ಪ್ರಯತ್ನಿಸುತ್ತೇನೆ. ಮಹಾದಾಯಿ ನದಿ ಜೋಡಣೆಗೆ ಶ್ರಮಿಸುತ್ತೇನೆ, ಕಿತ್ತೂರು ಹಾಗು ಖಾನಪುರ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಈ ವೇಳೆ ಸಂಪಗಾವ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ನಿಂಗಪ್ಪ ಅರಿಕೇರಿ, ರಾವಸಾಬ ಪಾಟೀಲ, ಚಂದ್ರಗೌಡ ಪಾಟೀಲ, ಮುದಕಪ್ಪ ಮರಡಿ, ಶಂಕರ ಮಾಡಲಗಿ, ಕೃಷ್ಣ ಬಾಳೇಕುಂದ್ರಿ, ಪಕ್ಕೀರಪ್ಪ ಸಕ್ರೆಣ್ಣವರ, ಈರಣ್ಣಾ ಕೊಡ್ಲಿ, ಸಂತೋಷ ಸಂಬಣ್ಣವರ, ಸಚಿನ ಪಾಟೀಲ, ಮಾಹಾದೇವ ಮಡಿವಾಳರ ಹಾಗು ಕಿತ್ತೂರು ಮತ ಕ್ಷೇತ್ರದ ಜಿ.ಪಂ, ತಾ.ಪಂ, ಪ.ಪಂ, ಗ್ರಾ.ಪಂ ಅಧ್ಯಕ್ಷರು ಸದಸ್ಯರು ಇದ್ದರು.