ಪ್ರಗತಿವಾಹಿನಿ ಸುದ್ದಿ, ಕುಮಟಾ:
45 ದಿನಗಳ ಹಿಂದಷ್ಟೆ ವಿವಾಹವಾಗಿದ್ದ ಯುವ ಉದ್ಯಮಿ ಸುದರ್ಶನ ಹೆಗಡೆ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ ಮಣಕಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಡಿಸೆಂಬರ್ 30ರಂದು ಅವರು ಶಿರಸಿ ತಾಲೂಕಿನ ದೇವತೆಮನೆಯ ಸುವಿಧಾ ಎನ್ನುವವಳನ್ನು ವಿವಾಹವಾಗಿದ್ದರು. ಕೊಂಕಣ ಅಕ್ವಾ ಮಿನರಲ್ ವಾಟರ್ ತಯಾರಿಕಾ ಘಟಕದ ಮಾಲಿಕರಾಗಿದ್ದ ಸುದರ್ಶನ, ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಜಿ.ಎಲ್.ಹೆಗಡೆ ಅವರ ಏಕೈಕ ಪುತ್ರ.
ಕೊಠಡಿಯಲ್ಲಿ ಇರುವ ಇವರನ್ನು ಊಟಕ್ಕೆಂದು ಕರೆದರೂ ಬಾರದಿದ್ದಾಗ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಪತ್ನಿ, ಮಾವ, ಅತ್ತೆ ಇದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.




