ಡಿಕೆಶಿ-ಜಾರಕಿಹೊಳಿ ಜಲಸಂಘರ್ಷ
ಪ್ರಗತಿವಾಹಿನಿ ಸುದ್ದಿ ಗೋಕಾಕ :
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಬೇಕೆನ್ನುವ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಆದೇಶಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸರಿಯಲ್ಲ. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ನಮ್ಮ ರೈತರಿಗೆ ಅನ್ಯಾಯ ಮಾಡಿ ಕೃಷ್ಣಾ ನದಿಗೆ ನೀರು ಬಿಡುವ ಕ್ರಮ ಖಂಡನೀಯವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಬಗ್ಗೆ ರವಿವಾರದಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೇ ೨೧ ರಂದು ಕೃಷ್ಣಾ ನದಿಗೆ ಕುಡಿಯುವ ನೀರಿನ ಸಂಬಂಧ ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಆದೇಶ ಮಾಡಿರುವುದು ಗಮನಕ್ಕೆ ಬಂದಿದ್ದು, ಇದರಿಂದ ನಮ್ಮ ಭಾಗದ ಸಾರ್ವಜನಿಕರಿಗೆ ಅನ್ಯಾಯವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗೋಕಾಕ, ಮೂಡಲಗಿ ಮತ್ತು ರಾಯಭಾಗ ತಾಲೂಕುಗಳ ರೈತರಿಂದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಅವರು ಹೇಳಿದ್ದಾರೆ.
ಘಟಪ್ರಭಾ ನದಿಗೆ ಮೇ ೨೪ ರಂದು ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವ ಭರವಸೆ ನೀಡಿರುವ ಪ್ರಾದೇಶಿಕ ಆಯುಕ್ತರು ಘಟಪ್ರಭಾ ನದಿ ಜೊತೆಗೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರನ್ನು ಹರಿಸಿದರೆ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕೃಷ್ಣಾ ನದಿಗೆ ನೀರನ್ನು ಬಿಡುವ ಬದಲಾಗಿ ನಮ್ಮ ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ತುರ್ತಾಗಿ ಕುಡಿಯುವ ನೀರಿನ ಸಂಬಂಧ ನೀರು ಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೃಷ್ಣಾ ನದಿಗೆ ೧೦೦೦ ಕ್ಯೂಸೆಕ್ಸ್ನಂತೆ ೧೨ ದಿನಗಳವರೆಗೆ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಕೃಷ್ಣಾ ತೀರದ ಸಾರ್ವಜನಿಕರಿಗೆ ನೀರು ತಲುಪುವುದಿಲ್ಲ. ಇದೇ ನೀರನ್ನು ಜಿಎಲ್ಬಿಸಿ ಮತ್ತು ಜಿಆರ್ಬಿಸಿ ಕಾಲುವೆಗಳಿಗೆ ಹರಿಸಿದರೆ ಗೋಕಾಕ, ಮೂಡಲಗಿ ಹಾಗೂ ರಾಯಭಾಗ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.
ಈ ಸಂಬಂಧ ನಾಳೆ ಸೋಮವಾರದಂದು ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಪ್ರಾದೇಶಿಕ ಆಯಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಗೋಕಾಕ, ಮೂಡಲಗಿ ಮತ್ತು ರಾಯಭಾಗ ತಾಲೂಕುಗಳ ಸಾರ್ವಜನಿಕರು ಮನವಿ ಅರ್ಪಿಸಲಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಒಂದು ವೇಳೆ ಕೃಷ್ಣಾ ನದಿಗೆ ನೀರು ಬಿಡುವುದಾದಲ್ಲಿ ಸರ್ವಪಕ್ಷಗಳ ಮುಖಂಡರುಗಳು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಪಡಿಸಿ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿರುವ ಬಾಲಚಂದ್ರ ಜಾರಕಿಹೊಳಿ ಅವರು, ಕೃಷ್ಣಾ ನದಿಗೆ ನೀರು ಬಿಡುವ ಸಂಬಂಧ ಮಹಾರಾಷ್ಟ್ರಕ್ಕೆ ತೆರಳಲಿರುವ ಸರ್ವಪಕ್ಷಗಳ ನಿಯೋಗದಲ್ಲಿ ಅವಶ್ಯವಿದ್ದಲ್ಲಿ ನಾನೂ ಕೂಡ ಭಾಗವಹಿಸಿ ಕೃಷ್ಣಾ ನದಿ ತೀರದ ರೈತರ ಸಂಕಷ್ಟಕ್ಕೆ ಧಾವಿಸುವಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನಮ್ಮ ಗೋಕಾಕ, ಮೂಡಲಗಿ ಹಾಗೂ ರಾಯಭಾಗ ತಾಲೂಕುಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಮೇ ೨೪ ರಿಂದ ೫ ದಿನಗಳವರೆಗೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಈ ಮನವಿಗೆ ಸ್ಪಂದಿಸದಿದ್ದರೆ ಮಂಗಳವಾರದಿಂದ ಜಿಎಲ್ಬಿಸಿ ಮತ್ತು ಜಿಆರ್ಬಿಸಿ ಭಾಗದ ರೈತರ ಜೊತೆಗೆ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ. ಆದ್ದರಿಂದ ಕೂಡಲೇ ಕಾಲುವೆಗಳಿಗೆ ನೀರನ್ನು ಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವತೆ ಡಿ.ಕೆ.ಶಿವಕುಮಾರ ಮೊನ್ನೆಯಷ್ಟೆ ಆದೇಶಿಸಿದ್ದನ್ನು ಇನ್ನು ಸ್ಮರಿಸಬಹುದು.
ನೀರು ಬಿಡದ ಮಹಾರಾಷ್ಟ್ರ: ಡಿಕೆಶಿ ಅಸಮಧಾನ, ಹಿಡಕಲ್ ನೀರು ಬಿಡುಗಡೆ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ