ಸಚಿವ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ದೇಶ ಸೇವೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಮಿಂ ಜನರೆ ಹೆಚ್ಚು ಪ್ರಾಣ ತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಮೇಲ್ವರ್ಗದವರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಡೋಲಿ ಗ್ರಾಮದಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವದ, ಕಾಶ್ಮೀರದ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಸೇನೆ ಮತ್ತು ಸರಕಾರ ನಿಭಾಯಿಸುತ್ತದೆ. ಇದು ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕೆಲಸವಲ್ಲ. ದೇಶದ ಗಂಭೀರ ಸಮಸ್ಯೆಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ. ಅಧಿಕಾರಕ್ಕಾಗಿ ಪ್ರಧಾನಿ ಮೋದಿ ದೇಶದ 130 ಕೋಟಿ ಜನರನನ್ನು ಹುಚ್ಚರನ್ನಾಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಅವಧಿಗಿಂತ ಮೋದಿ ಆಡಳಿತದಲ್ಲಿಯೇ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ವಿದ್ದಾಗಲೂ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಅದರ ಶ್ರೇಯಸ್ಸು ಸೇನೆಗೆ ನೀಡಿದೆ. ಆದರೆ ಮೋದಿ ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದು ದುರಂತವೇ ಸರಿ. ಮೋದಿ ಆಡಳಿತ ನಡೆಸಲು ಫೇಲ್ ಆಗಿದ್ದರು ಕೂಡ ಮೀಡಿಯಾದವರು ಪಾಸ್ ಮಾಡಿ ಮಾರ್ಕ್ಸ್ ಕಾರ್ಡ್ ಹಂಚುತ್ತಿದ್ದಾರೆ ಎಂದು ಟೀಕಿಸಿದರು.
ಪಾಕಿಸ್ತಾನವನ್ನು ಟೀಕಿಸಿ ಭಾಷಣ ಮಾಡುವ ಪ್ರಧಾನಿಯೇ ಪಾಕಿಸ್ತಾನಕ್ಕೆ ತೆರಳಿ ಮಾಜಿ ಪ್ರಧಾನಿ ನವಾಜ್ ಶರೀಫ್ ತಬ್ಬಿಕೊಂಡು ಬಿರ್ಯಾನಿ ತಿಂದು ಬಂದಿದ್ದಾರೆ. ಇಂತಹವರು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ ಎಂದು ಸತೀಶ ಲೇವಡಿ ಮಾಡಿದರು.
ಮೋದಿ ಆಡಳಿತದಲ್ಲಿಯೇ ಹೆಚ್ಚು ಬೀಪ್ ರಫ್ತು:
ಬಿಜೆಪಿ ನಾಯಕರು, ಮುಖಂಡರು ಅಂತರ್ಜಾತಿ ಮದುವೆ ಮಾಡಿಕೊಂಡರೆ ಇವರ ತಕರಾರಿಲ್ಲ. ಸಾಮಾನ್ಯ ಜನರು ಅಂತರ್ಜಾತಿ ಮದುವೆಯಾದರೆ ಮರ್ಯಾದೆ ಹತ್ಯೆಗೆ ಪ್ರೇರಣೆ ನೀಡುತ್ತಾರೆ. ಇದೆಂತಹ ನ್ಯಾಯ, ಒಂದೆಡೆ ಬೀಪ್ ಗಾಗಿ ಜನರ ಹತ್ಯೆ ನಡೆಯುತ್ತಿದೆ. ಮತ್ತೊಂದೆಡೆ ಮೋದಿ ಆಡಳಿತದಲ್ಲಿಯೇ ಅತೀ ಹೆಚ್ಚು ಬೀಪ್ ವಿದೇಶಕ್ಕೆ ರಫ್ತಾಗಿದೆ. ಇದರಲ್ಲಿ ಹಿಂದುಗಳ ಕಂಪನಿಯೇ ಹೆಚ್ಚು ಎನ್ನುವುದನ್ನು ಗಮನಿಸಬೇಕು ಎಂದರು.
ಕಳೆದ 10 ವರ್ಷದಲ್ಲಿ ಕಡೋಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಕೆಲವರು ನಮ್ಮ ವಿರುದ್ದ ಗುಂಪು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಅವಿವೇಕಿಗಳ ಬಗ್ಗೆ ಗಮನ ಹರಿಸಬೇಡಿ. ಸಾರಾಯಿ, ಹಣದ ಆಮಿಷಕ್ಕೆ ಯಾರು ಒಳಗಾಗಬೇಡಿ ಎಂದು ಸಚಿವ ಸತೀಶ ಜಾರಕಿಹೊಳಿ ಕೋರಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯ ಆನಂದ ಪಾಟೀಲ್, ರಾಜು ಮಾಯನ್ನಾ, ಸಂದೀಪ್ ಇತರರು ಇದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ