ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ದೇಶದ ಸಮಗ್ರ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಲಾದ ಬಜೆಟ್ನಲ್ಲಿ ಎಲ್ಲರ ವಿಕಾಸವೂ ಅಡಗಿದ್ದು, ಸರ್ವರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ಮಧ್ಯಮ, ಕಾರ್ಮಿಕ, ಮಹಿಳೆಯರಿಗೆ, ವೇತನದಾರರಿಗೆ ಬಹುದೊಡ್ಡ ಕಾಣಿಕೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ವಿತ್ತ ಸಚಿವ ಪಿಯುಷ ಗೋಯಲ್ ಅವರು ಇಂದು ಲೋಕ ಸಭೆಯಲ್ಲಿ ಮಂಡಿಸಿದ ಬಜೆಟ್ ಐತಿಹಾಸಿಕವಾಗಿದೆ ಎಂದು ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು ಬಣ್ಣಿಸಿದ್ದಾರೆ.
ಮುಖ್ಯವಾಗಿ ಈಗಿರುವ ಆದಾಯ ತೆರಿಗೆ ವ್ಯಾಪ್ತಿಯನ್ನು ೨.೫ ಲಕ್ಷದಿಂದ ೫ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಶೇ. ೫ರಷ್ಟಿರುವ ತೆರಿಗೆಯನ್ನು ರದ್ದುಗೊಳಿಸಲಾಗಿದ್ದು, ಮಧ್ಯಮ ವರ್ಗಕ್ಕೆ ಅತ್ಯಧಿಕ ಲಾಭವಾಗುತ್ತದೆ. ಗ್ರಾಮೀಣ ಭಾರತದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಅನಾರೋಗ್ಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಆಯಷ್ಮಾನ ಯೋಜನೆಯಡಿ ೫೦ಕೋಟಿ ಜನರಿಗೆ ಆರೋಗ್ಯ ವಿಮೆ, ಕಾರ್ಮಿಕರಿಗೆ ಇಎಸ್ಐ ಯೋಜನೆಯನ್ನು ಈಗಿರುವ ೧೫ ಸಾವಿರದಿಂದ ೨೧ ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮಯೋಗಿ ಮಂಧಾನ ಯೋಜನೆ ಮೂಲಕ ೩ ಸಾವಿರ ಪಿಂಚಣಿಯನ್ನು ನೀಡಲಾಗುತ್ತದೆ. ಜನೌಷಧಿ ಕೇಂದ್ರಗಳ ಮೂಲಕ ಅತೀ ಕಡಿಮೆ ದರದಲ್ಲಿ ಔಷಧಿ ನೀಡಲಾಗುತ್ತಿದೆ. ಕೃಷಿ ಮತ್ತು ಆರೋಗ್ಯಕ್ಕೆ ಅತ್ಯಧಿಕ ಒತ್ತು ನೀಡಲಾಗಿದ್ದು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ದುಪ್ಪಟ್ಟುಗೊಳಿಸಲಾಗಿದೆ. ರೈತರಿಗಾಗಿ ೭೫ ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಿದ್ದು, ರೈತರ ಏಳ್ಗೆಗೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ವರ್ಷಕ್ಕೆ ೬ ಸಾವಿರ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ನೀಡಲು ಯೋಜನೆ ರೂಪಿಸಲಾಗಿದೆ ಇದು ದೇಶದ ಅಭಿವೃದ್ದಿಗೆ ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ