Latest

ನಾಳೆ ಲೋಕಸಭಾ ಚುನಾವಣೆ ಅಧಿಸೂಚನೆ : ಡಾ.ಬೊಮ್ಮನಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಲೋಕಸಭಾ ಚುನಾವಣೆಗಾಗಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಮತಕ್ಷೇತ್ರಗಳಲ್ಲಿ ಗುರುವಾರ  ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಅಧಿಸೂಚನೆ ಪ್ರಕಟಗೊಳಿಸಿದ ದಿನದಿಂದಲೇ ಅಂದರೆ ಮಾ.೨೮ ರಿಂದಲೇ ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.
ಏಪ್ರೀಲ್ ೪, ೨೦೧೯ ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನವಾಗಿದ್ದು, ಏಪ್ರೀಲ್ ೫ ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ.
ನಾಮಪತ್ರಗಳನ್ನು ಹಿಂಪಡೆಯಲು ಏಪ್ರೀಲ್ ೮ ಕಡೆಯ ದಿನವಾಗಿದ್ದು, ಏಪ್ರೀಲ್ ೨೩ ರಂದು ಮತದಾನ ನಡೆಯಲಿದೆ. ಮೇ ೨೩ ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಅದೇ ರೀತಿ ಒಟ್ಟಾರೆ ಚುನಾವಣೆ ಪಕ್ರಿಯೆ ಮೇ ೨೭ ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದರು.
೦೧-ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ. ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರಗಳನ್ನು ಚಿಕ್ಕೋಡಿಯ ಮಿನಿ ವಿಧಾನಸೌದ ಮೊದಲ ಮಹಡಿಯಲ್ಲಿ ಸ್ವೀಕರಿಸಲಾಗುತ್ತದೆ.
ಅದೇ ರೀತಿ ೦೨-ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾಗಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಲ್ಲಿರುವ ನ್ಯಾಯಾಲಯ ಸಭಾಂಗಣದಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.

ವೀಕ್ಷಕರ ನೇಮಕ:
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಹಿರಿಯ ಐ.ಎ.ಎಸ್ ಅಧಿಕಾರಿ ಡಾ.ಮಣಿವಣ್ಣನ್ ಅವರನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡಿರುತ್ತದೆ. ಚುನಾವಣಾ ವೆಚ್ಚ ವೀಕ್ಷಕರಾಗಿ ರಿಷಭ್ ಗುಪ್ತಾ ಹಾಗೂ ಮೊಹಮ್ಮದ್ ಅಲಿ ಅವರನ್ನು ನೇಮಿಸಲಾಗಿರುತ್ತದೆ.
ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಮಧ್ಯಪ್ರದೇಶದ ಹಿರಿಯ ಐ.ಎ.ಎಸ್ ಅಧಿಕಾರಿ ರಾಜೀವ್ ಚಂದ್ರ ದುಬೆ, ಚುನಾವಣಾ ವೆಚ್ಚ ವೀಕ್ಷಕರಾಗಿ ಪ್ರದೀಪ್ ಕುಮಾರ್ ಮಜುಮ್ದಾರ ಅವರನ್ನು ನೇಮಿಸಲಾಗಿದೆ. ಎರಡೂ ಲೋಕಸಭಾ ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಮೋಹನ್ ಅವರನ್ನು ನೇಮಿಸಲಾಗಿದೆ.
ಚುನಾವಣಾ ವೆಚ್ಚ ವೀಕ್ಷಕರು ಗುರುವಾರ (ಮಾ.೨೮) ಜಿಲ್ಲೆಗೆ ಆಗಮಿಸಲಿದ್ದು, ಸಾಮಾನ್ಯ ವೀಕ್ಷಕರು ಏಪ್ರಿಲ್ ೩ ರಂದು ಜಿಲ್ಲೆಗೆ ಆಗಮಿಸುವರು ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲೆಯಲ್ಲಿ ೩೭.೨೨ ಲಕ್ಷ ಮತದಾರರು:
ಚಿಕ್ಕೋಡಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ೧೬-೧-೨೦೧೯ ಕ್ಕೆ ಅನ್ವಯಿಸುವಂತೆ ಒಟ್ಟಾರೆ ೩೫, ೨೨,೦೩೪ ಮತದಾರರು ಇದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೫,೭೯,೩೦೯ ಮತದಾರರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ೧೭,೪೯,೦೦೫ ಮತದಾರರು ಮತ್ತು ಉತ್ತರ ಕನ್ನಡ ಮತಕ್ಷೇತ್ರದಲ್ಲಿ (ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ) ೩,೯೩,೭೨೦ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ ೪೪೩೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಚಿಕ್ಕೋಡಿ ಮತಕ್ಷೇತ್ರದಲ್ಲಿ ೧೮೮೫, ಬೆಳಗಾವಿ ಮತಕ್ಷೇತ್ರ ೨೦೬೪ ಮತ್ತು ಉತ್ತರ ಕನ್ನಡ ಕ್ಷೇತ್ರದ ೪೮೫ ಮತಗಟ್ಟೆಗಳಿವೆ ಎಂದು ಅವರು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆ; ಐವರಿಗೆ ಅವಕಾಶ:
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯೂ ಸೇರಿದಂತೆ ಐವರಿಗೆ ಮಾತ್ರ ಅವಕಾಶವಿರುತ್ತದೆ.
ನಾಮಪತ್ರ ಸಲ್ಲಿಕೆಗೆ ಆಗಮಿಸುವ ಅಭ್ಯರ್ಥಿಗಳ ಮೂರು ವಾಹನಗಳಿಗೆ ಮಾತ್ರ ನಾಮಪತ್ರ ಸ್ವೀಕರಿಸುವ ಸ್ಥಳದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಡುವ ಎಲ್ಲ ಖರ್ಚುವೆಚ್ಚಗಳನ್ನು ಆಯಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು, ಚುನಾವಣಾ ಆಯೋಗದ ನಿರ್ದೇನದಂತೆ ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಭದ್ರತೆಯನ್ನು ಒದಗಿಸಲಾಗುವುದು ಎಂದು ಹೇಳಿದರು.
ನಗರದ ವ್ಯಾಪ್ತಿಯಲ್ಲಿ ಒಟ್ಟು ೭೯೨ ಮತಗಟ್ಟೆಗಳು ಹಾಗೂ ೯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ೧೮ ಎಫ್.ಎಸ್. ಟಿ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಭಂವರ್ ಸಿಂಗ್ ಮೀನಾ, ಡಿಸಿಪಿ ಸೀಮಾ ಲಾಟ್ಕರ್, ಯಶೋಧಾ ಒಂಟಗೋಡಿ, ಎಂಸಿಸಿ ನೋಡಲ್ ಅಧಿಕಾರಿ ಜಗದೀಶ್ ರೂಗಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button