Latest

ನಿಷೇಧಾಜ್ಞೆ ಜಾರಿ: ವಿಜಯೋತ್ಸವ ನಡೆಸುವಂತಿಲ್ಲ

 
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲೋಕಸಭಾ  ಚುನಾವಣೆ ಮತ ಎಣಿಕೆ  ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಮೇ ೨೨ರ ಮಧ್ಯರಾತ್ರಿ ೧೨ ಗಂಟೆಯಿಂದ ೨೪ ರ ಮಧ್ಯಾಹ್ನ ೧೨ ಗಂಟೆಯವರೆಗೆ ಕಲಂ ೧೪೪ ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ವಿಶಾಲ್. ಆರ್ ಆದೇಶ ಹೊರಡಿಸಿದ್ದಾರೆ. 
  ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದು ಮತ್ತು ಯಾವುದೇ ರೀತಿ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಮತ್ತು ವ್ಯಕ್ತಿಗತ ವಿತ್ತ-ಜೀವಗಳನ್ನು ಸಂರಕ್ಷಿಸುವ ಹಿತ ದೃಷ್ಟಿಯಿಂದ ಬೆಳಗಾವಿ ನಗರದ ಆರ್.ಪಿ.ಡಿ ಕಾಲೇಜು ಮತ್ತು ಚಿಕ್ಕೋಡಿ ಪಟ್ಟಣದ ಸಿ.ಟಿ.ಇ ಸೊಸೈಟಿಯ ಆರ್.ಡಿ.ಪಿ ಕಾಲೇಜು ಮತ ಎಣಿಕೆ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶದ ೨೦೦ ಮೀ. ಅಂತರ ಹೊರತುಪಡಿಸಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತದೆ.

ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳನ್ನು ಸಾರ್ವಜನಿಕ ಕಟ್ಟಡ ಮತ್ತು ಸರ್ಕರಿ ಕಚೇರಿಯ ಸುತ್ತಮುತ್ತ ಗುಂಪು ಸೇರುವುದನ್ನು ಅಥವಾ ಗುಂಪುಕೂಡುವುದನ್ನು, ಯಾವುದೇ ಆಯುಧ, ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಅಥವಾ ಹಿಡಿದು ಓಡಾಡುವುದನ್ನು, ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ರಾಜಕೀಯ ಸಭಾ ಸಮಾರಂಭಗಳನ್ನು ನಡೆಸುವುದನ್ನು, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಮತ್ತು ರಾಜಕೀಯ ಸಭಾ ಸಮಾರಂಭಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ. ಪಟಾಕಿಗಳನ್ನು ಸಿಡಿಸುವುದು, ಕ್ಷಾರಕ ಅಥವಾ ಸ್ಪೋಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ.

ಶವ ಸಂಸ್ಕಾರಕ್ಕೆ, ಹೊಟೇಲ್‌ಗಳಿಗೆ, ಚಲನಚಿತ್ರ ಮಂದಿರಗಳಿಗೆ, ಧಾರ್ಮಿಕ ಮತ್ತು ಮದುವೆ ಮೆರವಣಿಗೆಗಳಿಗೆ ಈ ಆಜ್ಞೆಯು ಅನ್ವಯಿಸುವುದಿಲ್ಲ, ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಣೆಯ ವೇಳೆ ಲಾಠಿಗಳನ್ನು ಉಪಯೋಗಿಸಲು ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿ ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾ ಚುನಾಣಾಧಿಕಾರಿ ಡಾ. ಆರ್. ವಿಶಾಲ ತಿಳಿಸಿದ್ದಾರೆ.

Home add -Advt

Related Articles

Back to top button