Latest

ನೀರು ವಿನಿಮಯ ಒಡಂಬಡಿಕೆಗೆ ಸರ್ಕಾರ ಸಿದ್ಧ: ಸಚಿವ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ:

ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ನೆರೆಯ ಮಹಾರಾಷ್ಟ್ರದ ಜತೆಗೆ ಪರಸ್ಪರ ನೀರು ವಿನಿಮಯ ಒಡಂಬಡಿಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಸಂಬಂಧಿಸಿದಂತೆ ನಗರದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಸೋಮವಾರ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಸಂಬಂಧಪಟ್ಟ ಶಾಸಕರು ಮತ್ತು ಸಂಸದರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಪ್ರತಿವರ್ಷ ನಾಲ್ಕು ಟಿಎಂಸಿ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳುವ ಪ್ರಸ್ತಾವ ನಮ್ಮ ಮುಂದಿಟ್ಟಿದೆ. ಎರಡೂ ರಾಜ್ಯಗಳ ಕೃಷ್ಣಾ ನದಿ ತೀರದ ಜನರ ಬವಣೆ ತೀರಿಸಲು ಈ ರೀತಿಯ ಒಡಂಬಡಿಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರದ ಸಹಮತವಿದೆ. ನಮ್ಮ ಸಹಮತದ ಬಗ್ಗೆ ತಕ್ಷಣವೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕೃತವಾಗಿ ಪತ್ರದ ಬರೆಯುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಪ್ರತಿವರ್ಷ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ತಲಾ ಎರಡು ಟಿಎಂಸಿ ನೀರು ತಮಗೆ ಒದಗಿಸಿದರೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿಸುವುದಾಗಿ ಒಡಂಬಡಿಕೆ ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಇದುವರೆಗೆ ಮಹಾರಾಷ್ಟ್ರ ಸರ್ಕಾರ ಹಣ ಪಡೆದು ನೀರು ಪೂರೈಸುತ್ತಿತ್ತು. ೨೦೦೪ ರಿಂದ ೨೦೧೭ ರವರೆಗೆ ಹಲವಾರು ಬಾರಿ ಈ ರೀತಿ ನೀರು ಪಡೆಯಲಾಗಿತ್ತು. ಆದರೆ ಈ ಬಾರಿ ನೀರು ವಿನಿಮಯದ ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರವು ಕೂಡ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಂಪುಟ ಸಭೆಯಲ್ಲಿ ನಿರ್ಧಾರ:
ನಾಲ್ಕು ಟಿಎಂಸಿ ನೀರು ವಿನಿಮಯ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ, ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಲಾಗುವುದು. ಸಮಿತಿಯು ನೀಡುವ ವರದಿಯ ಆಧಾರದ ಮೇಲೆ ಕಾನೂನು ಅಭಿಪ್ರಾಯ ಪಡೆದುಕೊಂಡು ಸಚಿವ ಸಂಪುಟ ಸಭೆಯಲ್ಲಿ ಒಡಂಬಡಿಕೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ನೀರು ವಿನಿಮಯ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುತ್ತದೆ. ನಮ್ಮ ರಾಜ್ಯದ ನೀರಾವರಿ ಯೋಜನೆಗಳಿಗೆ ಲಭ್ಯವಿರುವ ನೀರು ಹಂಚಿಕೆ ಮಾಡಲಾಗಿದ್ದು, ನೀರು ಉಳಿತಾಯ ಮಾಡುವ ಮೂಲಕ ಮಹಾರಾಷ್ಟ್ರದ ಜತೆ ಹೇಗೆ ವಿನಿಮಯ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ವರದಿ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ.
ಉಭಯ ರಾಜ್ಯಗಳ ಕೃಷ್ಣಾ ನದಿ ತೀರದ ಜನರು ಪ್ರತಿವರ್ಷ ಎದುರಿಸುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸೌಹಾರ್ದ ರೀತಿಯಲ್ಲಿ ಕಂಡುಕೊಳ್ಳಲಾಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಕ್ಷಣ ನೀರು ಬಿಡುಗಡೆಗೆ ಮನವಿ:
ಕೃಷ್ಣಾ ನದಿ ತೀರದಲ್ಲಿ ಇರುವ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿನ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಮಹಾರಾಷ್ಟ್ರ ಸರ್ಕಾರವು ಮಾನವೀಯತೆ ಆಧಾರದ ಮೇಲೆ ತಕ್ಷಣವೇ ನಾಲ್ಕು ಟಿಎಂಸಿ ನೀರು ಬಿಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು. ನೀರು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಇದುವರೆಗೆ ನೀರು ಬಿಟ್ಟಿಲ್ಲ; ಆದ್ದರಿಂದ ಸಮಸ್ಯೆಯ ತೀವ್ರತೆ ಅರಿತು ಕೂಡಲೇ ನೀರು ಬಿಡಬೇಕು ಎಂದರು.

ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಪಂಪಸೆಟ್ ಅಳವಡಿಸಿ ಕೃಷಿ ಉದ್ದೇಶಕ್ಕೆ ಬಳಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್, ಹೆಸ್ಕಾಂ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರು ವಿನಿಮಯ ಒಡಂಬಡಿಕೆಯ ಬಗ್ಗೆ ಮೇ ೨೯ ರ ಬಳಿಕ ಅಗತ್ಯ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ನೀರು ಬಿಡುಗಡೆಗೆ ಒಕ್ಕೊರಲಿನ ಮನವಿ:
ಇದಕ್ಕೂ ಮುಂಚೆ ನಡೆದ ಬೆಳಗಾವಿ, ವಿಜಾಪುರ ಹಾಗೂ ಬಾಗಲಕೋಟೆಯ ಜನಪ್ರತಿನಿಧಿಗಳ ಸಭೆಯಲ್ಲಿ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿರುವುದರಿಂದ ತಕ್ಷಣವೇ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಕ್ಕೊರಲಿನಿಂದ ಮನವಿ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವರಾದ ಆರ್.ಬಿ.ತಿಮ್ಮಾಪುರ, ಸರ್ಕಾರದ ಸಂಸದೀಯ ಕಾರ್ಯದರ್ಶಿ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಸಂಸದರಾದ ಪ್ರಕಾಶ್ ಹುಕ್ಕೇರಿ, ಪಿ.ಸಿ.ಗದ್ದಿಗೌಡರ, ರಾಜ್ಯಸಭೆ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ಶಾಸಕರಾದ ಮಹಾಂತೇಶ್ ಕೌಜಲಗಿ, ಮಹೇಶ್ ಕುಮಠಳ್ಳಿ, ಶ್ರೀಮಂತ ಪಾಟೀಲ, ಆನಂದ ನ್ಯಾಮಗೌಡ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಎಸ್. ಆರ್.ಪಾಟೀಲ, ಹನುಮಂತ ನಿರಾಣಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಿಲ್ ಅವರು ಕೃಷ್ಣಾ ನದಿತೀರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಹಾಗೂ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಸಭೆಗೆ ಮಾಹಿತಿಯನ್ನು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button