ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ೨೦೧೯-೨೦ನೇ ಸಾಲಿನ ಬಜೆಟ್ ಪ್ರಾದೇಶಿಕ ಅಸಮತೋಲನವನ್ನು ಇನ್ನಷ್ಟು ಹೆಚ್ಚಿಸುವ ಅತಿ ನಿರಾಶಾದಾಯಕ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.
ನೀರಾವರಿ ಯೋಜನೆಗಳ ಬಗ್ಗೆ ಸೂಕ್ತ ಯೋಜನೆಗಳಿಲ್ಲ. ಬಜೆಟ್ನಲ್ಲಿ ಮಹದಾಯಿ ಯೋಜನೆಯ ಪ್ರಸ್ತಾಪವೂ ಇಲ್ಲ. ಆಲಮಟ್ಟಿ ಡ್ಯಾಂ ಎತ್ತರವನ್ನು ೫೨೪ ಮೀಟರ್ಗಳಿಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿಲ್ಲ. ಜೊತೆಗೆ ನಿರಾಶ್ರಿತರ ಪುನರ್ವಸತಿಗಾಗಿ ಹಣವನ್ನೂ ಮೀಸಲಿರಿಸಿಲ್ಲ ಎಂದು ಕವಟಗಿಮಠ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯ ನೆಪ ಮುಂದೆ ಮಾಡಿ, ವಿಭಜಿಸಿ ಹಾಸನದಲ್ಲಿ ಹೊಸ ತಾಂತ್ರಿಕ ವಿವಿ ಸ್ಥಾಪಿಸಲು ಹೊರಟಿದ್ದಾರೆ. ಹಾಗಾದರೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಒಂದು ಹೊಸ ಆರೋಗ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗುವರೆ ಎಂದು ಕವಟಗಿಮಠ ಪ್ರಶ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ, ಖಾನಾಪುರ ತಾಲೂಕಿನ ಆರು ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆ, ೮೦ ಕೋಟಿ ರೂ. ವೆಚ್ಚದಲ್ಲಿ ಬೈಲಹೊಂಗಲ ನೀರಾವರಿ ಯೋಜನೆ ಹಾಗೂ ೩೫ ಕೋಟಿ ವೆಚ್ಚದಲ್ಲಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ರಸ್ತೆಗೆ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ೨೪ ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಜಿಲ್ಲೆ ಘಟಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿರುವ ಕ್ರಮವನ್ನು ಮಹಾಂತೇಶ ಕವಟಗಿಮಠ ಸ್ವಾಗತಿಸಿದ್ದು, ತಮ್ಮ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವುದಕ್ಕಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ