Latest

ಫೆ 3 ರಿಂದ 5ರ ವರೆಗೆ ಯಡೂರಿನ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ

ಕ್ರಿಕೇಟಿಗ ಅನೀಲ ಕುಂಬಳೆಗೆ ಈ ವರ್ಷದ ವಿಶ್ವಚೇತನ ಪ್ರಶಸ್ತಿ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಮಹಾದ್ವಾರ ಉದ್ಘಾಟನೆ 

 

 

    ಪ್ರಗತಿವಾಹಿನಿ ಸುದ್ದಿ, ಯಡೂರು (ಚಿಕ್ಕೋಡಿ)
ಸುಕ್ಷೇತ್ರ ಯಡೂರಿನ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ, ಮಹಾರಥೋತ್ಸವ, ವಿಶ್ವಚೇತನ ಪ್ರಶಸ್ತಿ ಪ್ರದಾನ, ಮಹಾದ್ವಾರ, ಧ್ವಜಸ್ಥಂಭ ಉದ್ಘಾಟನಾ ಸಮಾರಂಭವು ಫೆ ೩ ರಿಂದ ರಿಂದ ೫ ರವರೆಗೆ ನಡೆಯಲಿದೆ.

ಜಾತ್ರಾಮಹೋತ್ಸವ ಅಂಗವಾಗಿ ಹಲವು ವಿಧಾಯಕ ಕಾರ್ಯಕ್ರಮಗಳನ್ನು ಶ್ರೀಶೈಲ ಜಗದ್ಗುರು ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಗಡಿಭಾಗದ ಯಡೂರ ಕ್ಷೇತ್ರದಲ್ಲಿ ಕಾಡಸಿಧ್ಧೇಶ್ವರ ಮಠದ ಸ್ವರೂಪವಾಗಿ ಗುರುಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಕೃಷ್ಣಾ ನದಿಯಿಂದ ತೀರ್ಥಕ್ಷೇತ್ರಗಳ ತ್ರಿವೇಣಿ ಸಂಗಮವಾಗಿದ್ದು ಯಡೂರ ಕ್ಷೇತ್ರವು ದಕ್ಷಿಣ ಭಾರತದ ಕಾಶಿಯಾಗಿದೆ. ಪುರಾತನ ಕಾಲದಲ್ಲಿ ದಕ್ಷಬ್ರಹ್ಮನ ಯಜ್ಞ ಇದೇ ಸ್ಥಳದಲ್ಲಿ ನಡೆದಿದೆ ಎಂಬುದಕ್ಕೆ ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನ, ರುದ್ರಪಾದ ಬಸವೇಶ್ವರ ದೇವಸ್ಥಾನ, ಚಂದೂರದ ಚಂದ್ರೇಶ್ವರ ದೇವಾಲಯ, ಖೀದ್ರಾಪುರದ ಕೋಪೇಶ್ವರ ದೇವಸ್ಥಾನಗಳೇ ಸಾಕ್ಷಿಯಾಗಿವೆ.

ಜಾತ್ರಾಮಹೋತ್ಸವ ಅಂಗವಾಗಿ ಫೆ. ೩ ರಂದು ಲಭದಾಯಕ ಕೃಷಿ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುಕುಲ ಭಾಸ್ಕರ, ಗುರುಕುಲ ಭೂಷಣ, ಬಾಲ ಭಾಸ್ಕರ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಶೈಲ ಜಗದ್ಗುರುಗಳು ಸಮಾರಂಭದ ದಿವ್ಯ ಸಾನಿಧ್ಯವಹಿಸಿಕೊಳ್ಳಲಿದ್ದು ಬೆಂಗಳೂರಿನ ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಬಳ್ಳಾರಿಯ ಶ್ರೀ ಕಲ್ಯಾಣ ಮಹಾಸ್ವಾಮೀಜಿ, ಮನಗೂಳಿಯ ಶ್ರೀ ಸಂಗನಬಸವ ಶಿವಚಾರ್ಯ ಸ್ವಾಮೀಜಿ ಸಮ್ಮುಖವಹಿಸಲಿದ್ದಾರೆ.

ಸಂಸದ ಪ್ರಕಾಶ ಹುಕ್ಕೇರಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಗಣೇಶ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಶಾಸಕ ಕಲ್ಲಪ್ಪಾ ಮಗೇಣ್ಣವರ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಜಾಲಹಳ್ಳಿ ಬ್ರಹ್ಮನಮಠದ ಶ್ರೀ ಶಿವಾಭಿನವ ಜಯಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿವರಿಗೆ ಗುರುಕುಲಭಾಸ್ಕರ, ರೌಡಕುಂದದ ಶ್ರೀ ಮರಿಸಿಧ್ಧಲಿಂಗ ಶಿವಚಾರ್ಯ ಸ್ವಾಮೀಜಿವರಿಗೆ ಗುರುಕುಲಭೂಷಣ ಹಾಗೂ ಎಮ್ಮಿಗನೂರಿನ ಶಿಶುತಾನಸೇನ ಎನಿಸಿಕೊಂಡ ಜ್ಞಾನೇಶ ಅವರಿಗೆ ಬಾಲ ಭಾಸ್ಕರ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ ನೂತನ ಪಟ್ಟಾಧಿಕಾರ ರಜತ ಮತ್ತು ದ್ವಾದಶ ಮಹೋತ್ಸವ ಆಚರಿಸಿಕೊಂಡ ಸ್ವಾಮೀಜಿಗಳಿಗೆ ಗೌರವ ಸನ್ಮಾನ ಕೂಡ ನಡೆಯಲಿದೆ. ಸಾಮೂಹಿಕ ಅಯ್ಯಾಚಾರ ಮತ್ತು ದೀಕ್ಷಾ ಕಾರ್ಯಕ್ರಮ ಕೂಡ ನಡೆಯಲಿದೆ.
ಫೆ. ೪ ರಂದು ವಿಶ್ವವಿಖ್ಯಾತ ವಿಶ್ವಚೇತನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಶ್ರೀಶೈಲ ಜಗದ್ಗುರು ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ನಿಡಸೋಶಿಯ ಶ್ರೀ ಜಗದ್ಗುರು ಶ್ರೀ ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿಕೊಳ್ಳಲಿದ್ದಾರೆ.

ಸಮಾರಂಭದಲ್ಲಿ ವಿಶ್ವವಿಖ್ಯಾತ ಕ್ರಿಕೇಟಿಗ ಕನ್ನಡಿಗ ಅನೀಲ ಕುಂಬ್ಳೆಯವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಡಸಾವಳಗಿಯ ಶ್ರೀ ಶಂಭುಲಿಂಗ ಶಿವಚಾರ್ಯ ಸ್ವಾಮೀಜಿ ನೇತೃತ್ವವಹಿಸಿಕೊಳ್ಳಲಿದ್ದು ಅಕ್ಕಲಕೋಟದ ಶ್ರೀ ಬಸವಲಿಂಗ ಸ್ವಾಮೀಜಿ ಸಮ್ಮುಖವಹಿಸಿಕೊಳ್ಳಲಿದ್ದಾರೆ. ಕೆ.ಎಲ್.ಇ ಕಾರ್ಯಾಧ್ಯಕ್ಷ, ರಾಜ್ಯ ಸಭೆ ಸದಸ್ಯ ಡಾ ಪ್ರಭಾಕರ ಕೋರೆ ಸಮಾರಂಭದ ಅಧ್ಯಕ್ಷತೆಯನ್ನವಹಿಸಿಕೊಳ್ಳಲಿದ್ದಾರೆ. ಶಾಸಕಿ ಶಶಿಕಲಾ ಜೊಲ್ಲೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಿರಸಿಯ ಡಾ ವೆಂಕಟರಮಣ ಹೆಗಡೆ, ಭೀಮಗೌಡಾ ಪಾಟೀಲ, ಶ್ರೀಕಾಂತ ಉಮರಾಣೆ, ಜಗದೀಶ ಕಟವಗಿಮಠ, ಧಾರವಾಡದ ಭೀಮಾಂಬಿಕಾ ನಶಿಬಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.

ಫೆ.೫ ರಂದು ಮಹಾದ್ವಾರ, ಮುಖಮಂಟಪ, ಧ್ವಜಸ್ಥಂಭ ಉದ್ಘಾಟಣೆ, ಮಹಾರಥೋತ್ಸವ ನಡೆಯಲಿದೆ. ಮಹಾದ್ವಾರವನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ ಉದ್ಘಾಟಿಸಲಿದ್ದು, ಕೇಂದ್ರ ಸಚಿವೆ ಶ್ರೀ ಸಾಧ್ವಿ ನಿರಂಜನ ಜ್ಯೋತಿ ಮುಖಮಂಟಪವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶ್ರೀರಾಮ ಚಂದ್ರಾಪೂರಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಹುಬ್ಬಳ್ಳಿಯ ಡಾ ಅಶೋಕ ಶೆಟ್ಟರ ಧ್ವಜಸ್ಥಂಬವನ್ನು ಉದ್ಘಾಟಿಸಲಿದ್ದು, ಹೊನ್ನಾಳಿಯ ಡಾ ಒಡೆಯರ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಸಮ್ಮುಖವನ್ನು ವಹಿಸಿಕೊಳ್ಳಲಿದ್ದಾರೆ.

ಸಂಸದ ಸುರೇಶ ಅಂಗಡಿ, ವಿಪ ಸದಸ್ಯ ಮಹಾಂತೇಶ ಕವಟಗಿಮಠ, ವ್ಹಿ.ಆರ್.ಎಲ್. ಸಮೂಹ ಸಂಸ್ಥಾಪಕ ವಿಜಯ ಸಂಕೇಶ್ವರ, ಬಾಗಲಕೋಟದ ಶಾಸಕ ವೀರಣ್ಣ ಚರಂತಿಮಠ, ಜೊಲ್ಲೆ ಉದ್ಯೋಗ ಸಮೂಹ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಜಗದೀಶ ಗುಡಗಂಟಿಮಠ, ಅಮೀತ ಪ್ರಭಾಕರ ಕೋರೆ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾರಥೋತ್ಸವ ಸಮಾರಂಭದ ದಿವ್ಯಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳು ವಹಿಸಿಕೊಳ್ಳಲಿದ್ದು ಮಂದ್ರೂಪ, ಬೆಳ್ಳಂಕಿ, ಹೂಲಿ, ಖಾನಾಪುರ, ಬಾಗೋಜಿಕೊಪ್ಪ, ಮುತ್ತತ್ತಿ, ನವನಗರ ಹುಬ್ಬಳ್ಳಿ, ತಾವರೆಕೆರೆ, ಕಬ್ಬೂರ, ಪಾಶ್ಚಾಪೂರ, ಜಮಖಂಡಿ, ನಾಗಣಸೂರು, ಮಾಂಜರಿ,ಬನಹಟ್ಟಿ, ಅಂಬಿಕಾನಗರ, ಜೈನಾಪುರ, ಕೊಣ್ಣುರು, ಶಹಾಪೂರ, ಕರಿಬಂಟನಾಳ ಸೇರಿದಂತೆ ವಿವಿಧ ಶಿವಚಾರ್ಯ ಸ್ವಾಮೀಜಿಗಳು ಸಮ್ಮುಖ ಮತ್ತು ನೇತೃತ್ವವಹಿಸಿಕೊಳ್ಳಲಿದ್ದಾರೆ. ಬಂಡಿಗಣಿಯ ಶ್ರೀ ದಾನೇಶ್ವರ ಸ್ವಾಮೀಜಿಗಳಿಂದ ದಾಸೋಹ ಸೇವೆ ಕೂಡ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button