Latest

ಬಡತನದ ಮಧ್ಯೆಯೂ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:
ಅಚಲವಾದ ವಿಶ್ವಾಸ, ನಿರಂತರ ಪ್ರಯತ್ನ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಈ ಜಗತ್ತಿನಲ್ಲಿ ಯಾವುದು ಅಸಾಧ್ಯವಲ್ಲ ಎಂದು ಯುವ ಲೇಖಕ ಪ್ರವೀಣ ಗಿರಿ ಹೇಳಿದರು.ಅವರು ಸ್ಥಳೀಯ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ, ಬಡತನದ ಮಧ್ಯೆಯೂ  ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಕಾವೇರಿ ಹುಬ್ಬಳ್ಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಜಗತ್ತಿನಲ್ಲಿ ಎರಡು ನಮೂನೆಯ ಜನರಿದ್ದಾರೆ. ಒಬ್ಬರಿಗೆ ಕಲಿಯಲು ಸಾಕಷ್ಟು ಸೌಕರ್ಯಗಳಿದ್ದರೂ ಅವರಿಗೆ ಗುರಿ ಎಂಬುದು ಇರುವುದಿಲ್ಲ. ಇನ್ನೊಂದು ನಮೂನೆಯವರಿಗೆ ಕಲಿಯಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇರುತ್ತದೆ. ಆದರೆ ಸೌಕರ್ಯದ ಕೊರತೆ ಇರುತ್ತದೆ. ಒಳ್ಳೆಯ ಆಲೋಚನೆ ಮತ್ತು ಗುರಿ ಹೊಂದಿದವರಿಗೆ ಸ್ವಲ್ಪ ಸ್ವಲ್ಪ ಅವಕಾಶ ಸಿಕ್ಕಿದರೆ ಸಾಕು, ಅವರು ಅದರ ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದರು. 

ಶಿಕ್ಷಕ ಮಹೇಶ ಮಾವಿನಕಟ್ಟಿ ಮಾತನಾಡಿ, ಶಿಕ್ಷಣ ಎಂಬುದು ನಿರಂತರ ಪ್ರಕ್ರಿಯೆ ಎಷ್ಟೇ ಕಷ್ಟ ಬಂದರೂ ಛಲ ಬಿಡದೆ ಯಾರು ತಮ್ಮ ಗುರಿಯತ್ತ ಮುನ್ನುಗ್ಗುತ್ತಾರೊ ಅವರು ಸಾಧನೆ ಮಾಡುತ್ತಾರೆ ಎಂದರು.

ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕ ಪರವೇಜ್ ಹವಾಲ್ದಾರ ಮಾತನಾಡಿ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸದಾಸಿದ್ಧವಿದ್ದು ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ನಿವೃತ್ತ ಯೋಧರಾದ ಎಸ್.ಪಿ. ಹಿರೇಮಠ, ತರಬೇತುದಾರ ಜಗದೀಶ ಮಾಳಗಿ, ಸಿಎಓ ಗಂಗಾಧರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಕಾವೇರಿ ಹುಬ್ಬಳ್ಳಿ ಎಲ್ಲರಂತೆಯೇ ನನಗೂ ಕನಸಿತ್ತು ಆದರೆ ಈ ಕನಸಿಗೆ ನೀರೆರೆದವರು ಹಲವರು ಎಂದಳು.

ಈ ಸಂದರ್ಭದಲ್ಲಿ ಸುವರ್ಣಾ ಮಾಳಗಿ, ತಕ್ವೀಮ್ ಗೋಕಾಕ,  ಕಾವೇರಿಯ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button