ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ವಾಮಿ ವಿವೇಕಾನಂದ ಸ್ಮಾರಕದ ಉದ್ಘಾಟನೆಯ ಅಂಗವಾಗಿ ಶನಿವಾರ ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಯುವ ಸಮ್ಮೇಳನ ಜರುಗಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೇಲೂರು ಮಠದ ಸ್ವಾಮಿ ಸುವಿರಾನಂದಜಿ ಮಹಾರಾಜ್, ಈಗಿನ ಕಾಲದಲ್ಲಿ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಪಾಲಿಸಿ ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಯಶಸ್ಸು ಸಾಧಿಸಿದ್ದಾರೆ. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ಜಗತ್ತಿನ ಅನೇಕ ಎತ್ತರದ ಪರ್ವತಗಳನ್ನು ಏರಿದ ಅರುಣಿಮಾ ಸಿನ್ಹಾ ಮತ್ತು ಹಿಂದಿ ಚಲನಚಿತ್ರದ ಖ್ಯಾತ ತಾರೆ ಕಂಗನಾ ರಣಾವತ್ರವರ ಯಶಸ್ಸಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿಯಾಗಿದ್ದಾರೆ. ಸ್ವಾಮೀಜಿಯವರ ಜೀವನವು ಮನುಕುಲಕ್ಕೆ ಒಂದು ಕೊಡುಗೆ. ಇಂದಿನ ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಮಕೃಷ್ಣ ಮಿಶನ್ ಆಶ್ರಮ ದಾವಣಗೆರೆಯ ಸ್ವಾಮಿ ತ್ಯಾಗೀಶ್ವರಾನಂದಜಿ ಮಾತನಾಡಿ, ಜಗತ್ತಿನಲ್ಲಿ ಭಾರತದಂತಹ ಪುಣ್ಯಭೂಮಿ ಇಲ್ಲ. ಬೇರೆ ದೇಶದ ಜನ ಕಾಡಿನಲ್ಲಿ ಅಲೆಯುತ್ತಿದ್ದಾಗ ನಮ್ಮ ದೇಶದ ನಾಗರಿಕತೆ ಉಚ್ಚ ಸ್ಥಾನದಲ್ಲಿತ್ತು ಎಂದರು.
ಸ್ವಾಮಿ ವಿವೇಕಾನಂದ ಯುತ್ ಮೂವಮೆಂಟ್ನ ಡಾ. ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಮಾನವನ ಉನ್ನತಿಗೆ ಚಿಂತನೆಗೆ ತಲೆ, ಭಾವನೆಗೆ ಹೃದಯ ಮತ್ತು ಕ್ರಿಯಾಶೀಲತೆಗೆ ಕೈಗಳನ್ನು ಉಪಯೋಗಿಸಿಕೊಂಡು ವಿವೇಕಾನಂದರಂತೆ ನಾಯಕತ್ವದ ಗುಣಗಳನ್ನು ಯುವಕರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕೋಲ್ಕತಾ ಬೇಲೂರು ಮಠದ ಸ್ವಾಮಿ ವೇದಾತೀತಾನಂದಜಿ ಮಾತನಾಡಿ, ಯಾರು ಇತರರಿಗಾಗಿ ಬದುಕುತ್ತಾರೋ ಅವರೇ ನಿಜವಾಗಿ ಬದುಕಿರುವವರು. ಉಳಿದವರು ಬದುಕಿದ್ದೂ ಸತ್ತಂತೆ ಎಂದು ನುಡಿದರು.
ಚೆನ್ನೈ ವೇದಾಂತ ಕೇಸರಿ ಮಾಸಪತ್ರಿಕೆಯ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ ಮಾತನಾಡಿ, ನಿಸ್ವಾರ್ಥತೆಯೇ ದೇವರು. ಜೀವನದಲ್ಲಿ ಒಂದು ಉನ್ನತ ಆದರ್ಶವಿರಬೇಕು. ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧೆಯಿದೆ. ಆದರೆ ಸಹಕಾರವಿಲ್ಲ. ನಾವೆಲ್ಲರೂ ಸಹಕಾರದಿಂದ ಕೂಡಿ ಕೆಲಸ ಮಾಡೋಣ ಎಂದರು.
ರಾಮಕೃಷ್ಣ ವಿದ್ಯಾಶಾಲೆ ಸಂಯೋಜಕ ಸ್ವಾಮಿಯುಕ್ತೇಶಾನಂದಜಿ ಮಾತನಾಡಿ, ಮಾನವರಾಗಿ ಶ್ರೇಷ್ಠತೆಯನ್ನು ಪ್ರಯತ್ನ ಪೂರ್ವಕವಾಗಿ ಪಡೆಯಬೇಕು. ಮಾನವನಲ್ಲಿ ಸುಪ್ತವಾಗಿರುವ ದಿವ್ಯತೆಯನ್ನು ಪ್ರಕಟಗೊಳಿಸಬೇಕು ಎಂದು ಹೇಳಿದರು.
ಬೆಳಗಾವಿಯ ವಿವಿಧ ಕಾಲೇಜುಗಳ ೧೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಆಶ್ರಮದ ಸ್ವಾಮೀಜಿಗಳು ಮತ್ತು ಭಕ್ತರು ಭಾಗವಹಿಸಿದ್ದರು. ಬೆಳಗಾವಿಯ ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಸ್ವಾಮಿಜಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ