Latest

ಬೆಳಗಾವಿ/ಚಿಕ್ಕೋಡಿಗೆ ಬೇಡಿಕೆ ಇಟ್ರಾ ಅಮರಸಿಂಹ ಪಾಟೀಲ?

 

 

 

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾಜಿ ಸಂಸದ ಅಮರಸಿಂಹ ಪಾಟೀಲ ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಾಟದಲ್ಲಿರುವ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನುವ ವದಂತಿಯ ಮಧ್ಯೆ ಇಂತದ್ದೊಂದು ಬೆಳವಣಿಗೆ ಕುತೂಹಲ ಮೂಡಿಸಿದೆ. 

 

ಬುಧವಾರ ಮಧ್ಯಾಹ್ನ ಬೆಳಗಾವಿಯ ಕೆಎಲ್ಇ ಗೆಸ್ಟ್ ಹೌಸ್ ನಲ್ಲಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ಸಭೆ ನಡೆಸಿದರು ಯಡಿಯೂರಪ್ಪ. ಇದಾದ ಬಳಿಕ, ಸಭೆಯಲ್ಲಿ ಪಾಲ್ಗೊಂಡಿದ್ದ ಅಮರಸಿಂಹ ಪಾಟೀಲ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಯಡಿಯೂರಪ್ಪ ಅಮರಸಿಂಹ ಪಾಟೀಲ ಅವರ ಕೈ ಹಿಡಿದುಕೊಂಡು ಮಾತನಾಡುತ್ತಿರುವುದು ಅಲ್ಲಿದ್ದವರ ಗಮನ ಸೆಳೆಯಿತು.

ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ರಾಷ್ಟ್ರದ ಶೇ.50ರಷ್ಟು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬದಲಿಸಲಿದೆ ಎನ್ನುವ ಕುರಿತು ಕೆಲವು ದಿನದ ಹಿಂದೆ ಪ್ರಗತಿವಾಹಿನಿ ವಿಶೇಷ ವರದಿ ಪ್ರಕಟಿಸಿತ್ತು. ಈ ಮಧ್ಯೆ ಬೆಳಗಾವಿಗೂ ಬದಲೀ  ಅಭ್ಯರ್ಥಿಯ ಚಿಂತನೆ ನಡೆಯುತ್ತಿದೆ ಎನ್ನುವ ವದಂತಿ ಬಿಜೆಪಿ ವಲಯದಲ್ಲಿ ದಟ್ಟವಾಗಿದೆ. ಹಾಗೆಯೇ ಚಿಕ್ಕೋಡಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

ಅಮರಸಿಂಹ ಪಾಟೀಲ ಕಾಂಗ್ರೆಸ್ ಪಕ್ಷದಿಂದ 1999ರಲ್ಲಿ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸಧ್ಯ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಕೂಡ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನುವುದನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದರೇ ಎನ್ನುವ ಪ್ರಶ್ನೆ ಮೂಡಿದೆ.

ಆದರೆ, ಬೆಳಗಾವಿ ಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಿದೆ. 

ಅಮರಸಿಂಹ ಪಾಟೀಲರ ಆಪ್ತ ಮೂಲಗಳ ಪ್ರಕಾರ ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿಯಲು ಅಮರಸಿಂಹ ಪಾಟೀಲ ಆಸಕ್ತರಾಗಿದ್ದು, ಅದನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button