ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗಿಡದಲ್ಲಿರುವ ನೂರು ಕಾಗೆಗಳನ್ನು ಹಾರಿಸಲು ಒಂದೇ ಒಂದು ಕಲ್ಲು ಸಾಕು. ಅದರಂತೆ ಭಕ್ತಿಯಿಂದ ಹೇಳುವ ಒಂದೇ ಒಂದು ನಾಮಸ್ಮರಣೆ ನೂರಾರು ಪಾಪಗಳನ್ನು ಕಳೆಯುತ್ತದೆ. ಭಕ್ತಿ ಮಾರ್ಗದ ಸರಳ ದಾರಿಯನ್ನು ದಾಸರು ತೋರಿಸಿಕೊಟ್ಟಿದ್ದಾರೆ ಎಂದು ಪೇಜಾವರ ಮಠಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಇಂದಿಲ್ಲಿ ಹೇಳಿದರು.
ಮೂರು ದಿನಗಳ ಕಾಲ ಭಾಗ್ಯನಗರದ ಶ್ರೀ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಹರಿದಾಸ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಹರಿದಾಸ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೇಜಾವರ ಮಠಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಅಂತರಾಷ್ಟ್ರೀಯ ಮಟ್ಟದಲ್ಲಿ ದಾಸಸಾಹಿತ್ಯ, ವಿಷ್ಣುಸಹಸ್ರನಾಮ ಕುರಿತಂತೆ ಜಾಗೃತಿ ಮಾಡುತ್ತಿರುವ, ಅನಂತಾದ್ರೀಶ ಪ್ರಶಸ್ತಿಯನ್ನು ಸ್ವೀಕರಿಸಿರುವ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಕಾರ್ಯ ಶ್ಲಾಘನೀಯ. ಪಾರ್ಥಸಾರಥಿಯವರು ದಾಸಸಾಹಿತ್ಯ ಶಾಸ್ತ್ರ ಸಾಹಿತ್ಯವೆಂಬ ರಥದ ಸಾರಥಿಗಳು ಎಂದು ಅರಳುಮಲ್ಲಿಗೆ ಪಾರ್ಥಸಾರಥಿಯವರ ಕಾರ್ಯ ವೈಖರಿಯನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಪ್ರತಿವರ್ಷ ನೀಡುವ ಶ್ರೀ ಅನಂತಾದ್ರೀಶ ಪ್ರಶಸ್ತಿಯನ್ನು ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ನೀಡಿ ಶಾಲು ಹೊದಿಸಿ, ಪ್ರಶಸ್ತಿಪತ್ರವನ್ನು, ಫಲಪುಷ್ಫ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿದ ಡಾ. ಪಾರ್ಥಸಾರತಿ, ಶ್ರೀ ಅನಂತಾರ್ದಿಶರರು ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರಿನವರು. ನೂರಾರು ಎಕರೆ ಜಮೀನನ್ನು ಹೊಂದಿದ್ದ ಅವರು ಆ ಎಲ್ಲ ಆಸ್ತಿಯನ್ನು ಯೋಗ್ಯರಿಗೆ ದಾನ ಮಾಡಿ ಪುರಂದರದಾಸರಂತೆ ದಾಸರಾದರು. ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬ ಹೆಮ್ಮೆ ಅನ್ನಿಸುತ್ತಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ರಾಯಚೂರು ಶೇಷಗಿರಿದಾಸರು, ಐದು ಪರ್ಯಾಗಳನ್ನು ಕೃಷ್ಣನ ಪೂಜೆಯನ್ನು ಮಾಡಿದ ವಾದಿರಾಜರ ಕುರಿತು ಕೇಳುತ್ತಿದ್ದೆವು. ಆದರೆ ಇಂದು ಐದು ಪರ್ಯಾಯಗಳಿಂದ ಶ್ರೀ ಕೃಷ್ಣನನ್ನು ಪೂಜಿಸಿರುವ ನಾಡಿನ ಹಿರಿಯ ಸನ್ಯಾಸಿಗಳಾದ ಪೇಜಾವರ ಮಠಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರೊಂದಿಗೆ ನಾವಿರುವುದ ಪುಣ್ಯ ಎಂದರು.
ಬೆಳಗಾವಿ ಎಲ್ಲ ಭಕ್ತವೃಂದಗಳ ಪರವಾಗಿ ಪೇಜಾವರ ಮಠಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಫಲ ಹಾಗೂ ನಾಣ್ಯ ತುಲಾಭಾರ ನಡೆಯಿತು.
ಮೈಸೂರು ರಾಮಚಂದ್ರಾಚಾರ್ಯ ಇವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಗರುಪ್ರಸಾದನಗರದ ಶ್ರೀ ರಾಘವೇಂದ್ರ ಭಜನಾ ಮಂಡಳ, ಭಾಗ್ಯನಗರದ ಪ್ರೇರಣಾ ಪ್ರೀತಿ ಭಜನಾ ಮಂಡಳ, ಅನಂತಶಯನಗಲ್ಲಿಯ ಅನಂತಪುರಂದರ ಭಜನಾ ಮಂಡಳ ಹಾಗೂ ಕೋನವಾಲಗಲ್ಲಿಯ ವಿಜಯ ವಿಠ್ಠಲ ಭಜನಾ ಮಂಡಳದವರಿಂದ ಭಜನಾ ಕಾರ್ಯಕ್ರಮಗಳನು ಜರುಗಿದವು. ಶ್ರೀ ಗುರುರಾಜಾಚಾರ್ಯ ಜೋಶಿ, ಮಧ್ವಾಚಾರ್ಯ ಆಯಿ, ಹಣಮಂತ ಕೊಟಬಾಗಿ, ರಾಘವೇಂದ್ರ ಬೆಳಗಾಂವಕರ ವೇದಿಕೆಯಲ್ಲಿದ್ದರು.
ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯಿ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ