ಪ್ರಗತಿವಾಹಿನಿ ಸುದ್ದಿ, ನಾಗ್ಪುರ:
ಇಲ್ಲಿಯ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 8 ರನ್ ಜಯ ಗಳಿಸಿದೆ.
ಭಾರತ ನೀಡಿದ್ದ 251 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 49.3 ಓವರ್ಗೆ ಎಲ್ಲಾ ವಿಕೆಟ್ ಕಳೆದು 242 ರನ್ ಗಳಿಸುವುದರೊಂದಿಗೆ ಮಣಿಯಿತು.
ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕ ಗಳಿಸಿದರು. ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 48.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಭಾರಿಸಿತು. ಇನ್ನಿಂಗ್ಸ್ ಆರಂಭದಲ್ಲಿ ರೋಹಿತ್ ಶರ್ಮಾ (0), ಶಿಖರ್ ಧವನ್ (21) ವಿಕೆಟ್ ಬೇಗನೆ ಪತನವಾದಾಗ ಭಾರತ ಆಘಾತ ಅನುಭವಿಸಿತು. ಅನಂತರ ಬಂದ ಅಂಬಾಟಿ ರಾಯುಡು (18), ವಿಜಯ್ ಶಂಕರ್ (46), ಕೇದಾರ್ ಜಾಧವ್ (11), ಎಂಎಸ್ ಧೋನಿ (0) ಕೂಡ ಆಶಾದಾಯಕ ಆಟ ಆಡಲಿಲ್ಲ.
ಆದರೆ ವಿರಾಟ್ ಕೊಹ್ಲಿ ಬಾರಿಸಿದ 40ನೇ ಅಂತಾರಾಷ್ಟ್ರೀಯ ಏಕದಿನ ಶತಕದ (116 ರನ್) ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಉತ್ತಮ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಭಾರತದ ಇನ್ನಿಂಗ್ಸ್ ವೇಳೆ ಅಸೀಸ್ನ ಪ್ಯಾಟ್ ಕಮಿನ್ಸ್ 29 ರನ್ನಿಗೆ 4, ಆದಂ ಜಂಪಾ 2 ವಿಕೆಟ್ ಕೆಡವಿ ಬೌಲಿಂಗ್ನಲ್ಲಿ ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಆಸೀಸ್ಗೆ ಉತ್ತಮ ಆರಂಭ ಲಭಿಸಿತು. ಆಸ್ಟ್ರೇಲಿಯಾ ಮೊದಲ ವಿಕೆಟ್ ಮುರಿದಿದ್ದು 14.3ನೇ ಓವರ್ನಲ್ಲಿ. ಆಗ 83 ರನ್ ಇತ್ತು. ಆದರೆ ಭಾರತದ ಬೌಲರ್ಗಳು ಮಾರಕ ದಾಳಿ ಆರಂಭಿಸಿ ಗೆಲುವು ಒಲಿಸಿಕೊಂಡರು. ಜಸ್ಪ್ರೀತ್ ಬೂಮ್ರಾ, ವಿಜಯ್ ಶಂಕರ್ ತಲಾ 2, ಕುಲದೀಪ್ ಯಾದವ್ 3 ವಿಕೆಟ್ ಕೆಡವಿ ಎದುರಾಳಿಯನ್ನು ಮಣಿಸಿದರು.
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಲಭಿಸಿದ 500ನೇ ಗೆಲುವಿದು. ಈ ಜಯದೊಂದಿಗೆ ಕೊಹ್ಲಿ ಬಳಗ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಯ ಮುನ್ನಡೆ ಸಾಧಿಸಿದೆ.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ಕೇದಾರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ಆರನ್ ಫಿಂಚ್ (ಸಿ), ಮಾರ್ಕಸ್ ಸ್ಟೊಯಿನಿಸ್, ಪೀಟರ್ ಹ್ಯಾಂಡ್ಸ್ಕಾಂಬ್, ಗ್ಲೆನ್ ಮ್ಯಾಕ್ಸ್ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಆಡಮ್ ಜಂಪಾ, ಜಾಸನ್ ಬೆಹೆರೆನ್ಡಾಫ್.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ