Kannada NewsKarnataka News

ಮಕ್ಕಳು ಇಂಗ್ಲೀಷ ಕಲಿತರೆ ಮಾತ್ರ ಅವರ ಭವಿಷ್ಯ ಎನ್ನುವ ಭಾವನೆ ಬೆಳೆದಿದೆ

ಪ್ರಗತಿವಾಹಿನಿ ಬೆಳಗಾವಿ
ದೇಶದಲ್ಲಿ ಮಾತೃ ಭಾಷೆಯ ಏಕರೂಪ ಶಿಕ್ಷಣ ನೀತಿ ಜಾರಿಗೆ ಬರುವವರೆಗೆ ಇಂದಿನ ಜಾಗತೀಕರಣದ ಯುಗದಲ್ಲಿ ಯಾವ ಪ್ರಾದೇಶಿಕ ಭಾಷೆಗಳಿಗೂ ಸಂಕಷ್ಟ ತಪ್ಪಿದ್ದಲ್ಲ ಎಂದು ನಾಡಿನ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರು ಪ್ರತಿಪಾದಿಸಿದ್ದಾರೆ.
ಭಾನುವಾರದಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವು ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದಕಾರ್ಯಕ್ರಮದಲ್ಲಿ ಜಾಗತೀಕರಣ ಸಂದರ್ಭದಲ್ಲಿ ಕನ್ನಡ ಚಿಂತನೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಾತೃ ಭಾಷೆಯಲ್ಲಿಯೇ ರಾಜ್ಯಾಡಳಿತ ನಡೆಯಬೇಕು ಎಂಬುದನ್ನು ಇಡಿ ಜಗತ್ತಿನ ಭಾಷಾ ವಿದ್ವಾಂಸರು ಒಪ್ಪಿಕೊಂಡಿದ್ದರೂ ಅದು ಜಾರಿಗೆ ಬರುತ್ತಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ಕೊಡುತ್ತಿರುವ ಲಕ್ಷ ಲಕ್ಷ ರೂಪಾಯಿ ವೇತನದಿಂದಾಗಿ  ತಮ್ಮ ಮಕ್ಕಳು ಇಂಗ್ಲೀಷ ಕಲಿತರೆ ಮಾತ್ರ ಅವರ ಭವಿಷ್ಯ ಇದೆ ಎಂಬ ಭಾವಿಸುತ್ತಿದ್ದಾರೆ. ಜಾಗತೀಕರಣದ ಈ ಇಂಗ್ಲೀಷ ಸೆಳೆತವು ಮಾತೃ ಭಾಷೆಗಳಿಗೆ ಹೊಡೆತ ನೀಡುತ್ತಿದೆ. ಈ ಹೊಡೆತಕ್ಕೆ ಕೇವಲ ಕನ್ನಡ ಮಾತ್ರ ಸೊರಗುತ್ತಿಲ್ಲ. ದೇಶದ ಎಲ್ಲಾ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವಿವರಿಸಿದರು.
ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂಬುದೆ ಸ್ಪಷ್ಟವಾಗಿಲ್ಲ. ಹಿಂದಿ ರಾಷ್ಟ್ರೀಯ ಭಾಷೆಯೆಂಬುದು ಎಲ್ಲಿಯೂ ಉಲ್ಲೇಖವಾಗಿಲ್ಲ. ನಮ್ಮ ನೋಟುಗಳ ಮೇಲೆ ಮುದ್ರಿತವಾಗುವ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೆ. ಭಾರತವು ಬಹು ಭಾಷೆಗಳ ರಾಷ್ಟ್ರವಾಗಿದೆ ಎಂದು ವಿಶ್ಲೇಷಿಸಿದರು.
ಕನ್ನಡವು ಬಹು ಸತ್ವಯುತವಾದ ವೈವಿಧ್ಯಮಯ ಭಾಷೆಯಾಗಿದೆ. ಕನ್ನಡದಲ್ಲಿಯೇ ಅನೇಕ ಕನ್ನಡಗಳಿಗೆ. ಶಕ್ತಿಯುತ ಸಾಹಿತ್ಯ ರಚಿಸುವ ಸತ್ವ ಈ ಭಾಷೆಗಿದೆ ಎಂದ ಅವರು, ನಮ್ಮ ಮಕ್ಕಳಿಗೆ ಮೂಲಾಕ್ಷರಗಳನ್ನು ಗಟ್ಟಿಯಾಗಿ ಕಲಿಸುವ ಮೂಲಕ ಕನ್ನಡವನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು.
ಮುರುಗೋಡದ ಶ್ರೀ ನೀಲಕಂಠ ಸ್ವಾಮೀಜಿ ಹಾಗೂ ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಸಿರಿಗನ್ನಡ ಪ್ರತಿಷ್ಠಾನದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ತಿರ್ಲಾಪೂರ ಅವರ ಪುಸ್ತಕ ಮತ್ತು ನಾದಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಹಾಡಿರುವ ಭಕ್ತಿ ಗೀತೆಗಳ ಸಿಡಿ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಅನೇಕ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಷ್ಠಾನ ಸಾಗಿ ಬಂದ ದಾರಿಯ ಬಗ್ಗೆ ವಿವರಿಸಿದರು. ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು. ರುದ್ರಣ್ಣ ಚಂದರಗಿ ವಂದಿಸಿದರು. ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button