Latest

ಮಠಾಧೀಶರಿಗೆಲ್ಲ ಅನುಕರಣೀಯ ಶಿವಕುಮಾರ ಸ್ವಾಮಿಗಳು -ಕಲ್ಯಾಣ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತದಲ್ಲಿರುವ ಎಲ್ಲ ಮಠಾಧೀಶರಿಗೆ ಆದರ್ಶ ವ್ಯಕ್ತಿಯಾಗಿ ಸಾವಿರಾರು ಮಕ್ಕಳಿಗೆ ಅನ್ನ, ವಸತಿ ಹಾಗೂ ಜ್ಞಾನವನ್ನು ದಾನ ಮಾಡಿರುವ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಎಲ್ಲರಿಗೂ ಅನುಕರಣೀಯರಾಗಿದ್ದಾರೆ ಎಂದು ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಹೇಳಿದರು.

ಭಾನುವಾರ ಬೆಳಗಾವಿಯ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಾಸಿಕ ಸುವಿಚಾರ ಚಿಂತನೆಯ ೧೫ನೇ ಕಾರ್ಯಕ್ರಮದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂ. ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ವಿಶ್ವ ಗುರುವಿಗೆ ನುಡಿ ನಮನ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿರಾರು ಮಕ್ಕಳಿಗೆ ಅಕ್ಷರ, ಅನ್ನ, ವಸತಿ ದಾನ ಮಾಡಿರುವ ಸಿದ್ದಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿಯವರು ಅನಾಥ ಮಕ್ಕಳಿಗೂ ದಾರಿ ದೀಪವಾಗಿದ್ದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಣೆ ಮಾಡಲು ಚೆನೈಗೆ, ತುಮಕೂರಿಗೆ ಹೋಗಿದ್ದರಲ್ಲದೆ, ಶ್ರೀಗಳು ಶಿವೈಕ್ಯರಾದ ಸಂದರ್ಭದಲ್ಲಿಅಂತಿಮ ದರ್ಶನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದರು.

ಹುಕ್ಕೇರಿ ಹಿರೇಮಠದ ಭಕ್ತರು ಆಸ್ಟ್ರೇಲಿಯಾದಲ್ಲಿಯೂ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ಶೃದ್ದಾಂಜಲಿ ಸಭೆ ಏರ್ಪಡಿಸಿ ಶ್ರೀಗಳಿಗೆ ನಮನ ಸಲ್ಲಿಸಿದ್ದಾರೆ. ಫೆ.೬ ರಂದು ಗೋವಾದಲ್ಲಿ ಸದ್ಬಕ್ತರು ಸೇರಿಕೊಂಡು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ನೇತೃತ್ವದಲ್ಲಿ ಸೃದ್ದಾಂಜಲಿ ಸಭೆ ಏರ್ಪಡಿಸಿರುವುದು ಅಭಿಮಾನದ ಸಂಗತಿ. ಪರಮ ಪೂಜ್ಯರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗುವುದು ಅವಶ್ಯ ಎಂದು ಹೇಳಿದರು.

ಸಿದ್ದ ಸಮಾದಿಯೋಗದ ಸಾಧಕ ಅರವಿಂದ ಜೋಶಿ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು ಕೇವಲ ವೀರಶೈವ ಲಿಂಗಾಯತ ಸಮುದಾಯದವರಿಗೆ ಮಾತ್ರ ಗುರುಗಳಾಗಿರಲಿಲ್ಲ. ಇಡೀ ಭಾರತದಲ್ಲಿರುವ ಎಲ್ಲ ಸಮುದಾಯದವರಿಗೂ ವಿದ್ಯಾ ಧಾನ, ಅನ್ನ ದಾನ ಮಾಡುವುದರ ಮೂಲಕ ನಿಜವಾದ ವಿಶ್ವಗುರುವಾಗಿರುವುದು ಅಭಿಮಾನದ ಸಂಗತಿ. ಇವರ ಆಧ್ಯಾತ್ಮದ ಚಿಂತನೆ ಎಲ್ಲರಿಗೂ ಪೂರಕವಾಗಿದೆ ಎಂದರು.

ಮಾಜಿ ಶಾಸಕ ಬಿ.ಸಿ.ಸರಿಕರ ಮಾತನಾಡಿ, ಮಠದಲ್ಲಿಯೇ ಇದ್ದುಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತಿದ್ದ ಲಿಂ.ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಅವರನ್ನು ನಾನು ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ನಮ್ಮ ಜೀವನದಲ್ಲಿ ಕಂಡುಕೊಂಡಿದ್ದೇನೆ ಎಂದರು.

ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾಮಿಯಾದವರು ಹಸಿದವರ ಹೊಟ್ಟೆ ತುಂಬಿಸಿ ಜ್ಞಾನವನ್ನು ನೀಡಬೇಕು. ಅಂದಾಗ ಮಾತ್ರ ಭಕ್ತ ಸಮುದಾಯ ಜೀವಂತವಾಗುತ್ತದೆ ಇದಕ್ಕೆ ಆದರ್ಶ ಶಿವಕುಮಾರ ಸ್ವಾಮೀಜಿಯಾಗಿದ್ದರು ಎಂದರು.

ಸುವಿಚಾರ ಚಿಂತನದ ಸೇವಾ ಕತೃಗಳಾದ ಅರವಿಂದ ಪಾಟೀಲ ಮಾತನಾಡಿದರು. ಸರಿಗಮಪ ಖ್ಯಾತಿಯ ಜ್ಞಾನೇಶ ವಿಶೇಷ ಗಾಯನದ ಮೂಲಕ ಸ್ವರ ಶೃದ್ದಾಂಜಲಿ ಅರ್ಪಿಸಿದರು. ವಿರುಪಾಕ್ಷಯ್ಯ ನಿರಲಿಗಮಠ ಸ್ವಾಗತಿಸಿದರು. ಚಂದ್ರಶೇಖರ ಸವಡಿಸಾಲಿಮಠ ವಂದಿಸಿದರು.

ವೇದಮಾತೆ ಕವಿತಾ ಹಿರೇಮಠ ವೇದಘೋಷ ಮಾಡಿದರು. ಹಿಂದೂಸ್ತಾನಿ ಗಾಯಕಿ ನಮೃತಾ ಜಾಗಿರದಾರ ಪ್ರಾಥಿಸಿದರು. ವೇದಮೂರ್ತಿ ಸಿದ್ದಗಂಗಯ್ಯ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.

——

(ಪ್ರಗತಿವಾಹಿನಿ ಸುದ್ದಿಗಳನ್ನು ಪರಿಚಿತರಿಗೆ ಶೇರ್ ಮಾಡಿ ಮತ್ತು ನಿರಂತರವಾಗಿ ಸುದ್ದಿ ಪಡೆಯಲು ಬೆಲ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿಕೊಳ್ಳಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button