Latest

ಮತದಾರರ ಪಟ್ಟಿ ಪರಿಷ್ಕರಣೆ: ಅರ್ಹರ ಹೆಸರು ಸೇರ್ಪಡೆಗೆ ಸೂಚನೆ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮುಂಬರುವ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿಸಲು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ, ಹದಿನೆಂಟು ವರ್ಷ ಮೇಲ್ಪಟ್ಟವರ ಹೆಸರುಗಳನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕ ಪಿ.ಎ.ಮೇಘಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ನೋಂದಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಹಾಯ ಮಾಡಲು ಪ್ರತಿ ಮತಗಟ್ಟೆಗೂ ಬೂತ್ ಮಟ್ಟದ ಏಜೆಂಟ್ ರನ್ನು ನೇಮಕ ಮಾಡಿ ಅವರ ವಿವರಗಳನ್ನು ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿಗಳಿಗೆ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಆಗಬಹುದಾದ ಲೋಪಗಳನ್ನು ಈಗಲೇ ಕಂಡು ಹಿಡಿದು ಅವುಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಚುನಾವಣೆಯನ್ನು ಯಾವುದೇ ಲೋಪಗಳಿಲ್ಲದೇ ಜರುಗಿಸಲು ಸಾಧ್ಯವಾಗಲಿದೆ. ಮತದಾನದ ದಿನ ಈ ಕುರಿತು ತಕರಾರು ಸಲ್ಲಿಸಿದ್ದಲ್ಲಿ ಅದರ ಮೇಲೆ ಕ್ರಮ ಜರುಗಿಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.
ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರುಗಳು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯನ್ನು ನಿಯೋಜಿಸಿ ಉಚಿತವಾಗಿ ಮತದಾರರ ಪಟ್ಟಿಯ ಸಾಫ್ಟ್ ಕಾಪಿ ಸಿಡಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ 1300 ನಗರದಲ್ಲಿ 1400ಕ್ಕಿಂತ ಹೆಚ್ಚಿಗೆ ಮತದಾರರು ಇರುವ ಮತಗಟ್ಟೆಯನ್ನು ಬೆರ್ಪಡಿಸಿ ಮತ್ತೊಮ್ಮೆ ಉಪ ಮತಗಟ್ಟೆಯನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಜರುಗಿಸಲಾಗುವುದು ಎಂದು ಮೇಘಣ್ಣವರ ಹೇಳಿದರು.
ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಹಾಗೂ ಎಲ್ಲ ತಾಲ್ಲೂಕು ಮತದಾರರ ನೋಂದಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button