ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಉಡುಪಿ ಕಡಲತೀರದಿಂದ ಕಾಣೆಯಾಗಿರುವ 8 ಮಂದಿ ಮೀನುಗಾರರನ್ನು ಪತ್ತೆ ಹಚ್ಚಲು ಅಗತ್ಯ ವೈಮಾನಿಕ ನೆರವು ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಡಿಸೆಂಬರ್ 13ರಂದು ಸುವರ್ಣ ತ್ರಿಭುಜ ಎನ್ನುವ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಇವರೆಲ್ಲ ನಂತರ ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆ ಹಚ್ಚುವಂತೆ ಸ್ಥಳೀಯ ಕರಾವಳಿ ರಕ್ಷಣಾ ಪಡೆ ಮತ್ತು ನೌಕಾದಳಗಳಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಈ ಎಂಟು ಮೀನುಗಾರರನ್ನು ಹುಡುಕಲು ರಾಜ್ಯ ಸರಕಾರ ಕೂಡ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಈಗ ತಾವು ಮಧ್ಯೆ ಪ್ರವೇಶಿಸಿ, ಇಂತಹ ಕಾರ್ಯಾಚರಣೆಗೆ ಅಗತ್ಯವಿರುವ ವೈಮಾನಿಕ ನೆರವು ನೀಡುವಂತೆ ಅಥವಾ ಇನ್ನಿತರ ಬಗೆಯ ಸೂಕ್ತ ನೆರವು ಒದಗಿಸುವಂತೆ ಸಂಬಂಧಿಸಿದವರಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು,’’ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, ಕಳೆದ ನಾಲ್ಕು ತಿಂಗಳಿನಿಂದ ಇರಾನ್ ನಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡಿದ್ದ ಭಟ್ಕಳದ 18 ಮೀನುಗಾರರು ಸುರಕ್ಷಿತವಾಗಿ ವಾಪಸ್ ಬರಲು ನೆರವು ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ