ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ನವದೆಹಲಿ
ರಾಜ್ಯದ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಬೆಳವಣಿಗೆಗಳು ಮುಂದುವರಿದಿದ್ದು, ಸಮ್ಮಿಶ್ರ ಸರಕಾರ ಮತ್ತು ಬಿಜೆಪಿ ಎರಡೂ ಪಾಳಯದಲ್ಲಿ ಆತಂಕ ಮುಂದುವರಿದಿದೆ.
ಮಂಗಳವಾರ ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ತಮ್ಮ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿರುವ ಬೆನ್ನಲ್ಲೇ ಬುಧವಾರ 7 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ನಿಂದ ಹೊರಹೋಗುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಇದರಿಂದಾಗಿ ಸಮ್ಮಿಶ್ರ ಸರಕಾರದ ಬಲ 120ರಿಂದ 111ಕ್ಕೆ ಕುಸಿಯಲಿದೆ. ಆದರೆ, ಈ ಸಂಖ್ಯೆ 107ಕ್ಕೆ ಕುಸಿದರೆ ಮಾತ್ರ ಸರಕಾರ ಅಭದ್ರವಾಗಲಿದೆ. ಅಂದರೆ ಇನ್ನೂ ಕನಿಷ್ಟ 4 ಶಾಸಕರು ಕಾಂಗ್ರೆಸ್ ನಿಂದ ಹೊರಗೆ ಬರಬೇಕಿದೆ. ಸಧ್ಯಕ್ಕೆ ಅಂತಹ ಸಾಧ್ಯತೆ ಕಾಣುತ್ತಿಲ್ಲ.
ಸಧ್ಯಕ್ಕೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿಯ ನಾಗೇಂದ್ರ, ಚಿಂಚೋಳಿಯ ಉಮೇಶ್ ಜಾಧವ, ಅಥಣಿಯ ಮಹೇಶ್ ಕುಮಟಳ್ಳಿ, ಹಗರಿಬೊಮ್ಮನಳ್ಳಿಯ ಭೀಮಾ ನಾಯ್ಕ್, ಕಂಪ್ಲಿಯ ಜೆ.ಎನ್.ಗಣೇಶ್ ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಗೆ ರಾಜಿನಾಮೆ ನೀಡುವ ಸಾಧ್ಯತೆ ಇದೆ. ಈ ಗುಂಪಿಗೆ ಇನ್ನೂ 4 ಜನ ಸೇರಿದರೆ ಮಾತ್ರ ಸರಕಾರಕ್ಕೆ ಆತಂಕ ಉಂಟಾಗಲಿದೆ. ಆನಂದ ಸಿಂಗ್, ಡಾ.ಅಜಯ ಸಿಂಗ್, ಶಿವರಾಮ ಹೆಬ್ಬಾರ್ ಆರಂಭದಲ್ಲಿ ಬಿಜೆಪಿ ಸೇರುವ ಉತ್ಸಾಹ ತೋರಿದ್ದರೂ ನಂತರ ಹಿಂದಕ್ಕೆ ಸರಿದಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಸರಕಾರಕ್ಕೆ ಯಾವುದೇ ಆತಂಕವಿಲ್ಲ ಎನ್ನುತ್ತಲೇ ಸರಣಿ ಸಭೆಗಳನ್ನು ನಡೆಸುತ್ತಿದೆ. ಶಾಸಕರನ್ನು ಹಿಡಿದಿಡುವ ಮತ್ತು ಕೈಗೆ ಸಿಗದಿರುವ ಶಾಸಕರನ್ನು ಪತ್ತೆ ಮಾಡುವ ಯತ್ನ ಮುಂದುವರಿಸಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ತಡರಾತ್ರಿಯವರೆಗೆ ಸಭೆಗಳನ್ನು ನಡೆಸಿದ್ದಾರೆ. ಬುಧವಾರ ಎಲ್ಲ ಶಾಸಕರೂ ಬೆಂಗಳೂರಿನಲ್ಲಿ ಸೇರುವಂತೆ ಸೂಚಿಸಲಾಗಿದೆ.
ಸಧ್ಯಕ್ಕೆ ಹರಿಯಾಣದ ಗುರಗಾಂವ್ ನಲ್ಲಿ ಬಿಜೆಪಿ ಶಾಸಕರು ಸೇರಿಕೊಂಡಿರುವ ರೆಸಾರ್ಟ್ ಮುಂದೆ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ ಯುವಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು, ಕರ್ನಾಟಕದ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಕೈಬಿಡುವಂತೆ ಘೋಷಣೆ ಕೂಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಘೋಷಣೆ ಕೂಗುತ್ತಿದ್ದಾರೆ. ರೆಸಾರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಗುರುಗ್ರಾಮದಲ್ಲಿರುವ ಬಿಜೆಪಿ ಶಾಸಕರು ಯಾವುದೇ ಸ್ಪಷ್ಟ ಮಾಹಿತಿ ಸಿಗದೆ ಪಕ್ಷದ ಹೈಕಮಾಂಡ್ ಆದೇಶದಂತೆ ಅಲ್ಲಿಯೇ ಬೀಡು ಬಿಟ್ಟಿದ್ದು, ಮುಂದೇನಾಗಲಿದೆ ಎನ್ನುವ ಕುತೂಹಲದಲ್ಲಿದ್ದಾರೆ. ಪಕ್ಷದ ನಾಯಕರು ಯಾವುದೇ ಮಾಹಿತಿ ಬಿಟ್ಟು ಕೊಡುತ್ತಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏನಾದರಾಗಲಿ, ದೇವರಿದ್ದಾನೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಾತ್ರ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ.
ಒಟ್ಟಾರೆ ಈ ಅಸ್ಥಿರತೆ ಇನ್ನೂ ಕೆಲವು ದಿನ ಮುಂದುವರಿಯುವ ಲಕ್ಷಣ ಕಾಣುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ