Latest

ಮುಖ ನೋಡಿ ಮಣೆ ಹಾಕಿದಂತಿದೆ ಬಜೆಟ್ -ಚಂದರಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಂದು ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಮುಂಗಡಪತ್ರದಲ್ಲಿ ನಾಯಕರ ಮುಖ ನೋಡಿ ಮಣೆ ಹಾಕಿದಂತಿದೆ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಭಿಪ್ರಾಯಪಟ್ಟಿದ್ದಾರೆ.
 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರೇವಣ್ಣ ಅವರನ್ನು ಖುಷಿಪಡಿಸಲು ಕುಮಾರಸ್ವಾಮಿ ಅವರು
 ಈ ಬಜೆಟ್ ಮೂಲಕ ಪ್ರಯತ್ನಿಸಿದ್ದಾರೆ.  ಕೇವಲ ಭತ್ತ ಬೆಳೆಯುವ ರೈತರಿಗೆ ಒಂದು ಹೆಕ್ಟೇರ್ ಗೆ ಹತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ.ಈ ನೆರವನ್ನು ಉಳಿದೆಲ್ಲ ರೈತರಿಗೆ ವಿಸ್ತರಿಸಬೇಕು.
ಮಹಾದಾಯಿ ನದಿ ನೀರನ್ನು ಹಂಚಿಕೆ ಮಾಡಿದ ಪಾಂಚಾಲ ಟ್ರಿಬ್ಯುನಲ್ ನೀಡಿದ ತೀರ್ಪಿನನ್ವಯ ಕಳಸಾ ನಾಲೆಯ 2.72 ಟಿಎಮ್ ಸಿ ನೀರಿನ ಬಳಕೆಗಾಗಿ ಬಜೆಟ್ ನಲ್ಲಿ ಸುಮಾರು 200 ಕೋ.ರೂ.ಹಣವನ್ನು ಮೀಸಲಿಡಬೇಕಾಗಿತ್ತು.ಆದರೆ ಬಜೆಟ್ ನಲ್ಲಿ ಇದರ ಪ್ರಸ್ತಾಪವೇ ಇಲ್ಲ. ಬೆಳಗಾವಿ ಜಿಲ್ಲೆಯ ಅನೇಕ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಕುಮಾರಸ್ವಾಮಿ ಅವರು ಏನನ್ನೂ ಹೇಳಿಲ್ಲ. 500 ಕೋಟಿ ರೂ.ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಲಾದ ಸುವರ್ಣ ಸೌಧಕ್ಕೆ ಬೆಂಗಳೂರಿನ ವಿಧಾನಸೌಧದಿಂದ ಪ್ರಮುಖ ಕಚೇರಿಗಳ ಸ್ಥಳಾಂತರದ ಸಂಬಂಧ ನಿರ್ಧಿಷ್ಟ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಪ್ರಕಟಿಸುವರೆಂದು ನಿರೀಕ್ಷಿಸಲಾಗಿತ್ತು. ಆದರೆ ಗಡಿಭಾಗದ ಕನ್ನಡಿಗರ ನಿರೀಕ್ಷೆ ಹುಸಿಯಾದಂತಾಗಿದೆ. ಬೆಳಗಾವಿ ಮಹಾನಗರಕ್ಕೆ ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ, ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಕುಮಾರಸ್ವಾಮಿ ಅವರು ಹಣ ಒದಗಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಪ್ರಸಕ್ತ ರಾಜಕೀಯ ಬಿಕ್ಕಟ್ಟಿಗೆ ಬೆಳಗಾವಿ ಜಿಲ್ಲೆಯ ನಾಯಕರ ” ಕಾಣಿಕೆ” ಹೆಚ್ಚಾಗಿರುವುದರಿಂದೇನೊ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button