ನೇಪಿಯರ್: ನೇಪಿಯರ್‌ನಲ್ಲಿರುವ ಮೆಕ್‌ಲೀನ್ ಪಾರ್ಕ್‌ನಲ್ಲಿ ನಡೆದ ಆತಿಥೇಯ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಮಾರಕ ಬೌಲಿಂಗ್ ದಾಳಿ ನಡೆಸಿತು. ಭಾರತದ ಕುಲದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಯುಜುವೇಂದ್ರ ಚಾಹಲ್ 2 ವಿಕೆಟ್ ಕೆಡವಿ ಎದುರಾಳಿಯನ್ನು ಕಡಿಮೆ ರನ್ನಿಗೆ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡರು. ಹೀಗಾಗಿ 38 ಓವರ್ ಮುಕ್ತಾಯಕ್ಕೆ ಕೇನ್ ವಿಲಿಯಮ್ಸನ್ ಬಳಗ ಎಲ್ಲಾ ವಿಕೆಟ್ ಕಳೆದು 157 ರನ್ ಭಾರಿಸುವುದರೊಂದಿಗೆ ಭಾರತಕ್ಕೆ 158 ರನ್ ಗುರಿ ನೀಡಿತ್ತು.
ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಓವರ್‌ನಲ್ಲಿ (1.5) ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ 5 ರನ್‌ನೊಂದಿಗೆ ಔಟಾಗಿ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಕಾಲಿನ್ ಮುನ್ರೋ (8) ಕೂಡ ಶಮಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಕಿವೀಸ್ ವಿರುದ್ಧ ನಾಯಕ ಕೇನ್ ವಿಲಿಯಮ್ಸನ್ ಒಬ್ಬರೇ ಗಮನಾರ್ಹ ಹೋರಾಟ ನಡೆಸಿದ್ದು. ವಿಲಿಯಮ್ಸನ್ 64 ರನ್ ಕೊಡುಗೆ ತಂಡಕ್ಕೆ ನೀಡಿದರು. ಅದು ಬಿಟ್ಟರೆ ರಾಸ್ ಟೇಲರ್ ಅವರ 24 ರನ್ನೇ ವೈಯಕ್ತಿಕ ದೊಡ್ಡ ಮೊತ್ತ.
ಅತೀ ಬಿಸಿಲಿನ (ಬ್ಯಾಡ್‌ಲೈಟ್) ಕಾರಣಕ್ಕೆ ಪಂದ್ಯ ಕೊಂಚಕಾಲ ನಿಲುಗಡೆಯಾಗಿತ್ತು. ಮತ್ತೆ ದಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ ಭಾರತಕ್ಕೆ 49 ಓವರ್‌ಗಳಲ್ಲಿ 156 ರನ್ ಗುರಿ ನೀಡಲಾಯಿತು. ಗುರಿ ಬೆನ್ನತ್ತಿದ ಭಾರತಕ್ಕೆ ಶಿಖರ್ ಧವನ್ ಅಜೇಯ 75 ರನ್, ವಿರಾಟ್ ಕೊಹ್ಲಿ 45 ರನ್ ಸೇರಿಸಿದರು. ಭಾರತ 34.5 ಓವರ್‌ಗಳಲ್ಲಿ 2 ವಿಕೆಟ್ ಕಳೆದು 156 ರನ್ ಪೇರಿಸುವುದರೊಂದಿಗೆ ಗೆಲುವನ್ನು ಸಂಭ್ರಮಿಸಿತು.
ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಉತ್ತಮ ಬೌಲಿಂಗ್ ಪ್ರದರ್ಶಿಸಿದ (39/4) ಭಾರತದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠರೆನಿಸಿದರು.
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕ್), ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಡೌಗ್ ಬ್ರಸ್ವೆಲ್, ಟಿಮ್ ಸೌಥಿ, ಲಾಕೀ ಫರ್ಗುಸನ್, ಟ್ರೆಂಟ್ ಬೌಲ್ಟ್.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಎಂಎಸ್ ಧೋನಿ (ವಿ.ಕೆ), ಕೇದಾರ್ ಜಾಧವ್, ಅಂಬಾಟಿ ರಾಯುಡು, ವಿಜಯ್ ಶಂಕರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ