Latest

ರಮೇಶ್ ಜಾರಕಿಹೊಳಿ ವಿರುದ್ಧ ಲಖನ್ ನಿಲ್ತಾರಾ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇತ್ತ ಲೋಕಸಭಾ ಚುನಾವಣೆ ನಡೆಯುತ್ತಿದ್ದರೆ, ಅತ್ತ ಲೋಕಸಭಾ ಚುನಾವಣೆ ನಂತರದ ರಾಜಕೀಯ ಬೆಳವಣಿಗೆಗಳ ಕುರಿತು ತೆರೆಮರೆಯಲ್ಲಿ ತೀವ್ರ ಬೆಳವಣಿಗೆಗಳು ನಡೆಯುತ್ತಿವೆ.

ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರ ಉರುಳುವುದು ಖಚಿತ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗಾವಿ ಮತ್ತು ಗೋಕಾಕ ರಾಜಕೀಯದಲ್ಲೂ ಭಾರಿ ಬೆಳವಣಿಗೆಗಳ ಕಾಣಿಸಿಕೊಂಡಿವೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಬಾಗಿಲಲ್ಲಿ ನಿಂತಿರುವುದರಿಂದ ಗೋಕಾಕ ಕ್ಷೇತ್ರದಲ್ಲಿ ನಡೆಯಬಹುದಾದ ಉಪಚುನಾವಣೆ ಕುರಿತು ಆಗಲೇ ತೀವ್ರ ಚರ್ಚೆ ಆರಂಭವಾಗಿದೆ.

ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದು ನಿಕ್ಕಿ ಎಂದಾಗಿದ್ದರೂ ಲೋಕಸಭಾ ಚುನಾವಣೆ ವೇಳೆ ಆಗುತ್ತಿರುವ ಬೆಳವಣಿಗೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ಕಾವು ನೀಡಿವೆ.

ಲೋಕಸಭಾ ಚುನಾವಣೆಯಲ್ಲಿ ರಮೇಶ ಕಾಂಗ್ರೆಸ್ ಪರ ಪ್ರಚಾರ ಮಾಡಬಹುದೆನ್ನುವ ನಿರೀಕ್ಷೆ ಕೊನೆಗೂ ಹುಸಿಯಾದ ಹಿನ್ನೆಲೆಯಲ್ಲಿ ಸಹೋದರ ಹಾಲಿ ಸಚಿವ ಸತೀಶ ಜಾರಕಿಹೊಳಿ ಇದೀಗ ರಮೇಶ ವಿರುದ್ಧ ಓಪನ್ ಆಗಿ ಮಾತನಾಡಲು ಆರಂಭಿಸಿದ್ದಾರೆ.

ರಮೇಶ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ, ಎಲ್ಲ ಚುನಾವಣೆಗಳಲ್ಲಿ ರಮೇಶ್ ಪರವಾಗಿ ಕೆಲಸ ಮಾಡುತ್ತಿದ್ದ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪರ ಪ್ರಚಾರ ಮಾಡುವಂತೆ ಸತೀಶ್ ಮನವೊಲಿಸಿ ಕರೆತಂದಿದ್ದಾರೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೊತೆಗೂ ಪ್ರಚಾರ ಸಭೆಯಲ್ಲಿ ಲಖನ್ ಕಾಣಿಸಿಕೊಂಡಿದ್ದಾರೆ.

ಗೋಕಾಕ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಲಖನ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಸತೀಶ್ ಘೋಷಿಸಿದ್ದಾರೆ. ರಮೇಶ ಬಿಜೆಪಿಯಿಂದ ಸ್ಫರ್ಧಿಸಿದರೆ ಲಖನ್ ಕಾಂಗ್ರೆಸ್ ನಿಂದ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಸತೀಶ್ ಹೇಳಿದ್ದಾರೆ.

ಆದರೆ ಇದಕ್ಕೆ ಲಖನ್ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಾಗಿಲ್ಲ. ಆತ್ಮೀಯ ಸಂಬಂಧ ಹೊಂದಿರುವ ರಮೇಶ್ ವಿರುದ್ಧ ಕಣಕ್ಕಿಳಿಯುವ ಧೈರ್ಯವನ್ನು ಲಖನ್ ಮಾಡುವುದು ಡೌಟ್ ಎನ್ನುತ್ತೇವೆ ಮೂಲಗಳು. ರಮೇಶ್ ಬಿಜೆಪಿ ಸೇರಿದರೆ ಪ್ರತಿಬಾರಿ ಅವರಿಗೆ ಫೈಟ್ ನೀಡುತ್ತಿದ್ದ ಬಿಜೆಪಿಯ ಅಶೋಕ ಪೂಜಾರಿ ನೆಲೆ ಕಳೆದುಕೊಳ್ಳಲಿದ್ದಾರೆ. ರಮೇಶ್ ಗೆ ಪ್ರಬಲ ಎದುರಾಳಿಯೇ ಇಲ್ಲವಾಗಬಹುದು.

ಒಟ್ಟಾರೆ ಲೋಕಸಭಾ ಚುನಾವಣೆ ಬಳಿಕ ಗೋಕಾಕ ಕ್ಷೇತ್ರದಲ್ಲಿ ತೀವ್ರ ರಾಜಕೀಯ ಬೆಳವಣಿಗೆ ನಡೆಯುವುದು ಖಚಿತ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರೊಂದಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button