ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಅಧಿಕಾರ ಉಳಿಸಿಕೊಳ್ಳಲು ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳಲು ಹಿಂಜರಿಯದ ಜೆಡಿಎಸ್ ಇದೀಗ ರಾಜ್ಯದಲ್ಲಿ ತನ್ನ ಹಿಡಿತ ಮುಂದುವರಿಸಲು ಹೊಸ ಮೈತ್ರಿ ಸೂತ್ರಕ್ಕೆ ಸ್ಕೆಚ್ ಹಾಕುತ್ತಿದೆಯೇ?
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಈಚಿನ ನಿಲುವುಗಳು ಅಂತಹ ಸಂಶಯವನ್ನು ಹುಟ್ಟುಹಾಕುತ್ತಿವೆ. ಆಂದ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಜೊತೆಗಿನ ಚರ್ಚೆಯ ವೇಳೆ ದೇವೇಗೌಡ ತೋರಿದ ನಿರಾಸಕ್ತಿ ಇಂತಹ ಪ್ರಶ್ನೆ ಹುಟ್ಟು ಹಾಕಿದೆ.
ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚಿಸುವ ಯತ್ನಕ್ಕಾಗಿ ರಾಷ್ಟ್ರವನ್ನೇ ಸುತ್ತುತ್ತಿರುವ ಚಂದ್ರಬಾಬು ನಾಯ್ಡು ದೇವೇಗೌಡರನ್ನೂ ಭೇಟಿ ಮಾಡಿದ್ದಾರೆ. ಆದರೆ ಚುನಾವಣೆ ಫಲಿತಾಂಶ ಬರುವವರೆಗೆ ತಾವು ಈ ವಿಷಯದಲ್ಲಿ ತಟಸ್ಥರಿರುವುದಾಗಿ ಹೇಳಿದ್ದಲ್ಲದೆ, ಸಧ್ಯಕ್ಕೆ ಯಾವುದೇ ಅವಸರದ ನಿರ್ಧಾರಬೇಡ ಎಂದು ನಾಯ್ಡುಗೂ ಗೌಡರು ಹೇಳಿ ವಾಪಸ್ ಕಳಿಸಿದ್ದಾರೆ.
ಬಿಜೆಪಿ ಮತ್ತು ನರೇಂದ್ರ ಮೋದಿ ಬಗೆಗೆ ತೀವ್ರ ವಿರೋಧ ಹೊಂದಿದ್ದ ದೇವೇಗೌಡ ಇದೀಗ ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚಿಸುವ ಸಂಬಂಧ ಆಸಕ್ತಿ ಕಳೆದುಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ -ಜೆಡಿಎಸ್ ಮೈತ್ರಿಯನ್ನು ಹೆಚ್ಚು ದಿನ ಉಳಿಸುವ ಲಕ್ಷಣ ಕಾಣುತ್ತಿಲ್ಲ. ಹಾಗಾದಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಳ್ಳಬೇಕಾದೀತು. ಇಂತಹ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಜೊತೆಗೆ ಅಧಿಕಾರ ಹಂಚಿಕೆಗೆ ಸಿದ್ಧವಾಗುತ್ತಿದೆ ಎನ್ನುವ ದಟ್ಟ ವದಂತಿ ಹರಡಿದೆ.
ಬಿಜೆಪಿಗೆ ಮುಖ್ಯಮಂತ್ರಿ (ಬಿ.ಎಸ್.ಯಡಿಯೂರಪ್ಪ) ಸ್ಥಾನ ಕೊಟ್ಟು ತಾನು ಉಪಮುಖ್ಯಮಂತ್ರಿ (ಎಚ್.ಡಿ.ರೇವಣ್ಣ) ಸ್ಥಾನ ಇಟ್ಟುಕೊಳ್ಳುವ ಸೂತ್ರದತ್ತ ಜೆಡಿಎಸ್ ವಾಲಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿಯೇ ದೇವೇಗೌಡ ಸ್ವಲ್ಪಮಟ್ಟಿಗೆ ಸೌಮ್ಯರಾಗಿದ್ದಾರೆ ಎನ್ನಲಾಗುತ್ತಿದೆ.
ಎಕ್ಸಿಟ್ ಪೋಲ್ ನಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕೀಯ ಧೃವೀಕರಣ ಯಾವರೀತಿಯಾಗುತ್ತದೆ ಎನ್ನುವ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ