ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮಾಯಾವತಿ ಪ್ರಧಾನಿಯಾಗಬೇಕು ಎಂದು ವಾರದ ಹಿಂದೆ ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ, ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ನೋಡಲು ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.
ಶನಿವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಲು ಅರ್ಹರಾಗಿದ್ದಾರೆ. ನರೇಂದ್ರ ಮೋದಿ ಕೇವಲ ಕಾಗದದ ಹುಲಿ. ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆ ತಾವು ಹೇಳಿದ್ದ ಮಾತಿಗೆ ಸ್ಪಷ್ಟೀಕರಣ ನೀಡಲು ಯತ್ನಿಸಿದ ಕುಮಾರಸ್ವಾಮಿ, ರಾಷ್ಟ್ರದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಿವೆ. ಮಾಯಾವತಿ, ಮಮತಾ ಬ್ಯಾನರ್ಜಿಯಂತಹ ಹಲವು ನಾಯಕರು ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದೆ. ಆದರೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆನ್ನುವುದು ನಮ್ಮ ಬಯಕೆ ಎಂದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಪುಣ್ಯಾತ್ಮ ಎಂದು ಸಂಬೋಧಿಸಿದ್ದರು ಕುಮಾರಸ್ವಾಮಿ. ಆ ಪುಣ್ಯಾತ್ಮ ರಾಹುಲ್ ಗಾಂಧಿ ಬೆಂಬಲಿಸಿದ್ದರಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದ್ದರು. ಅವರ ಋುಣ ತೀರಿಸುವುದಕ್ಕಾಗಿ ಅವರು ಪ್ರಧಾನಿಯಾಗಬೇಕು ಎಂದು ಕುಮಾರಸ್ವಾಮಿ ಈಗ ಹೇಳುತ್ತಿದ್ದಾರೆ ಎನ್ನುವುದು ವಿಪಕ್ಷಗಳ ಹೇಳಿಕೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ