ಬೆಳಗಾವಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಧುರವಾದ ಮಾತುಗಳ ಮೂಲಕವೇ ಪ್ರತಿಯೊಬ್ಬರ ಮನಸ್ಸನ್ನು ಪರಿವರ್ತನೆ ಮಾಡಿ ಧರ್ಮ ಕಟ್ಟುವ ಕೆಲಸವನ್ನು ಮಾಡಿದ ಶಂಕರಾಚಾರ್ಯರು ಭಾರತದ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಪ್ರಮುಖರು ಎಂದು ಜಿ.ಆರ್.ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಯುಕ್ತಾಶ್ರಯದಲ್ಲಿ ಗುರುವಾರ ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ನಡೆದ ಶಂಕರಾಚಾರ್ಯರ ಜಯಂತಿ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನ ತತ್ವಶಾಸ್ತ್ರದ ಇತಿಹಾಸದಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯುವ ಹೆಸರು ಶ್ರೀ ಶಂಕರಚಾರ್ಯರದು. ಪ್ರಾಚೀನ ಕಾಲದಲ್ಲಿ ಪ್ರಯಾಣ ಮಾಡುವುದು ಅತಿ ಕಷ್ಟಕರವಾದ ಕೆಲಸವಾಗಿದ್ದಾಗ ಶಂಕರಾಚಾರ್ಯರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚರಿಸಿ ಜನಮನ ಗೆದ್ದ ಮಹಾಪುರುಷರು ಎಂದು ಕುಲಕರ್ಣಿ ಅವರು ಬಣ್ಣಿಸಿದರು.
ಕಾರ್ಯಕ್ರವನ್ನು ಉದ್ಘಾಟಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ಅವರು ಬ್ರಹ್ಮಸೂತ್ರವನ್ನು ಬರೆದ ಮಹಾನ್ ದಿವ್ಯಪುರುಷ ಶಂಕರಾಚಾರ್ಯರು ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದ್ದು, ಮುಂದಿನ ಬಾರಿ ಅದ್ಧೂರಿಯಾಗಿ ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲಾಗುವುದು ಎಂದರು.
ಉಪ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಾದ ಸೀಬಿರಂಗಯ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಗುರುನಾಥ ಕಡಬೂರ, ಬಿ.ಆರ್.ಪಾಟೀಲ ಉಪಸ್ಥಿತರಿದ್ದರು. ಶ್ರೀರಂಗ ಜೋಶಿ ಅವರು ನಾಡಗೀತೆ ಪ್ರಸ್ತುತ ಪಡಿಸಿದರು. ನೆಹರೂ ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್.ಯು.ಜಮಾದಾರ ಅವರು ನಿರೂಪಿಸಿದರು. ಕೊನೆಯಲ್ಲಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ವಿವಿಧ ಸಂಘಸಂಸ್ಥೆಗಳು ಹಾಗೂ ಸಮಾಜದ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ