Belagavi NewsBelgaum NewsKannada NewsKarnataka News

*ಹೃದಯವನ್ನು ಕಾಳಜಿಪೂರ್ವಕವಾಗಿ ಕಾಪಾಡಿಕೊಳ್ಳಬೇಕು: ಡಾ. ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಧುನಿಕತೆ ಬೆಳೆದಂತೆ ಸ್ಮಾರ್ಟ ಕೆಲಸಗಳಾಗುತ್ತಿದ್ದು, ದೈಹಿಕ ಶ್ರಮವಿಲ್ಲದ ಜೀವನ ನಡೆಯುತ್ತಿದೆ. ಅನೇಕ ಯುವಕರು ಕೆಲಸದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಿರುವದು ಕಂಡು ಬರುತ್ತಿದೆ.  ಹೃದಯಸ್ತಂಬನವಾದರೆ ಪ್ರತಿಯೊಂದೂ ನಿಂತುಬಿಡುತ್ತವೆ. ಅದರಲ್ಲಿಯೂ ಮುಖ್ಯವಾಗಿ ದುಶ್ಚಟಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಆದ್ದರಿಂದ ದೇಹದ ಪ್ರಮುಖ ಅಂಗವಾದ ಹೃದಯವನ್ನು ಅತ್ಯಂತ ಕಾಳಜಿಪೂರ್ವಕವಾಗಿ ಕಾಪಾಡಿಕೊಳ್ಳಬೇಕು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.

ವಿಶ್ವ ಹೃದಯ ದಿನದ ಅಂಗವಾಗಿ ದಿ. 27 ಸೆಪ್ಟಂಬರ 2024 ರಂದು ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಹ್ರದ್ರೋಗ ವಿಭಾಗವು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಒತ್ತಡದ ಜೀವನ, ಆಲ್ಕೊಹಾಲ ಸೇವನೆ ಹಾಗೂ ಧೂಮ್ರಪಾನವನ್ನು ಸಂಪೂರ್ಣವಾಗಿ ತ್ಯಜಿಸುವದರಿಂದ ಹೃದಯವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಮದ್ಯ ಮತ್ತು ಧೂಮ್ರಪಾನ ಸೇವನೆಯಿಂದ ಹೃದಯಾಘಾತಕ್ಕೆ ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದರು.

ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯ ಪೋರವಾಲ ಅವರು ಮಾತನಾಡಿ, ವೈದ್ಯರ ಹತ್ತಿರ ತೆರಳುವದಕ್ಕಿಂತ ಮುಂಚೆ ನಿಯಮಿತವಾಗಿ ವ್ಯಾಯಾಮ, ಆಹಾರ ಪದ್ದತಿ ಸೇರಿದಂತೆ ಒಳ್ಳೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಇತ್ತೀಚಿನ ಅಹಾರ ಪದ್ದತಿ, ಆರೋಗ್ಯಕ್ಕೆ ಮಾರಕವಾದ ಪದಾರ್ಥಗಳು, ಪೌಷ್ಠಿಕ ಆಹಾರದ ಕೊರತೆ, ಹೃದ್ರೋಗ ಹೆಚ್ಚಲು ಕಾರಣವಾಗುತ್ತಿವೆ. ಆದ್ದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮ, ನಡಿಗೆ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೃದ್ರೋಗ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ, ಡಾ. ವಿಜಯಾನಂದ ಮೆಟಗುಡಮಠ, ಡಾ. ಪ್ರಸಾದ ಎಂ. ಆರ್., ಡಾ. ಸಮೀರ ಅಂಬರ, ಡಾ. ವಿಶ್ವನಾಥ ಹೆಸರೂರ, ಡಾ. ಡ್ಯಾನಿಶ ಮೆಮೂನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button