Latest
ಅನ್ಯಾಯದ ಪರ ನಿರ್ಣಯ ಸ್ವೀಕರಿಸುವ ಉದ್ದೇಶ ತಿಳಿದ ಕಾರಣಕ್ಕೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗಿಯಾಗಿಲ್ಲ -ಸ್ವರ್ಣವಲ್ಲೀ ಶ್ರೀ
ಧ್ವನಿ ಎತ್ತುವ ಅನಿವಾರ್ಯತೆ ಎದುರಾಗಿದೆ ಎಂದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಇಡೀ ಜಗತ್ತಿನಲ್ಲಿ ರಾಮಚಂದ್ರಾಪುರ ಮಠ ಮಾತ್ರ ಶಂಕರರ ಅವಿಚ್ಛಿನ್ನ ಪರಂಪರೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ
ಸನ್ಯಾಸ ಜೀವನದಿಂದ ಪತಿತರಾದ ಸ್ವಾಮೀಜಿಗಳ ಪ್ರಕರಣದಲ್ಲಿ ಶೀಘ್ರ ನಿರ್ಣಯ ಪ್ರಕಟಿಸಬೇಕು
ಸನ್ಯಾಸಾಶ್ರಮದಿಂದ ಪತಿತರಾದ ಸ್ವಾಮೀಜಿಯನ್ನು ಸಂವರ್ಧಿನಿ ಸಭಾದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ -ಯಡತೊರೆ ಶ್ರೀ
ಪ್ರಗತಿವಾಹಿನಿ ಸುದ್ದಿ, ಸ್ವರ್ಣವಲ್ಲಿ
ಧಾರ್ಮಿಕ ಕೇಂದ್ರಗಳ ವಾತಾವರಣ, ಅವುಗಳ ಕಡೆಗೆ ಸಮಾಜದ ದೃಷ್ಟಿಕೋನ ಕೆಡುತ್ತಿದೆ. ಎಲ್ಲ ಸ್ವಾಮೀಜಿಗಳನ್ನು ಒಂದೇ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಹೀಗಾಗಿ ಧ್ವನಿ ಎತ್ತುವ ಅನಿವಾರ್ಯತೆ ಎದುರಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಅಖಿಲ ಹವ್ಯಕ ಒಕ್ಕೂಟ, ವೇದಾಂತ ಭಾರತಿ ಸಹಯೋಗದಲ್ಲಿ ಭಾನುವಾರ ಸ್ವರ್ಣವಲ್ಲೀಯಲ್ಲಿ ನಡೆದ ಶ್ರೀ ಶಂಕರ ನಮನ ಹಾಗೂ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಮಾಜವು ವಿಪ್ಲವತೆಗೆ ಒಳಗಾಗಿದೆ. ಶಂಕರ ತತ್ವಗಳ ಅನುಕರಣೆ ಆಗುತ್ತಿಲ್ಲ. ಸಮಾಜದಲ್ಲಾಗುತ್ತಿರುವ ವಿಪ್ಲವಗಳನ್ನು ನಿವಾರಿಸಿ, ಶಂಕರರ ತತ್ವ, ಧರ್ಮ, ಸಮಾಜವನ್ನು ಉಳಿಸಲು ಸನ್ಯಾಸ ಜೀವನದಿಂದ ಪತಿತರಾದ ಸ್ವಾಮೀಜಿಗಳ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.
ಬಹುತೇಕ ಶಂಕರರ ತತ್ವ ಪ್ರತಿಪಾದಿಸುವ ಮಠಗಳು ಯಾವತ್ತೂ ವಿಚ್ಛಿನ್ನವಾಗಿಲ್ಲ. ಆದರೆ ಇಡೀ ಜಗತ್ತಿನಲ್ಲಿ ರಾಮಚಂದ್ರಾಪುರ ಮಠ ಮಾತ್ರ ಶಂಕರರ ಅವಿಚ್ಛಿನ್ನ ಪರಂಪರೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಅನ್ಯಾಯದ ಪರ ನಿರ್ಣಯಗಳನ್ನು ಸ್ವೀಕರಿಸುವ ಹವ್ಯಕ ಮಹಾಸಭಾದ ಉದ್ದೇಶ ತಿಳಿದ ಕಾರಣಕ್ಕೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗಿಯಾಗಿಲ್ಲ ಎಂದು ಸ್ವಾಮಿಗಳು ಸ್ಪಷ್ಟಪಡಿಸಿದರು.
ಹವ್ಯಕ ಮಹಾಸಭಾ ಆಯೋಜಿಸಿದ್ದ ವಿಶ್ವ ಹವ್ಯಕ ಸಮ್ಮೇಳನಕ್ಕೆ ಪರ್ಯಾಯವಾಗಿ ಈ ಕಾರ್ಯಕ್ರಮ ಸಂಘಟಿಸಿದ್ದಲ್ಲ ಎಂದ ಅವರು, ಶಂಕರ ಪಥದಲ್ಲಿ ಪ್ರತಿಯೊಂದು ಮಠ ಸಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಅವಮಾನವಾದರೆ ಇತರರ ಜೀವ ತೆಗೆಯುವ ಹಂತಕ್ಕೆ ಹೋಗುತ್ತಾರೆ ಎಂದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ
ಯಡತೊರೆ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಮಾತನಾಡಿ, ಸನ್ಯಾಸಾಶ್ರಮಕ್ಕೆ ವೇದ ಪ್ರಮಾಣವಾದರೆ, ಮಠಾಧೀಶರಿಗೆ ಶಂಕರರ ಮಠಾನಾಮ್ನ್ಯಾಯವೇ ಪ್ರಮಾಣವಾಗಿದೆ. ಆದರೆ ಸನ್ಯಾಸಾಶ್ರಮದಿಂದ ಪತಿತರಾದ ಸ್ವಾಮೀಜಿಯನ್ನು ಸಂವರ್ಧಿನಿ ಸಭಾದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ. ಅಲ್ಲದೇ, ಮಠವು ಯೋಗ್ಯ, ನಿಷ್ಕಾಮ ವ್ಯಕ್ತಿಯನ್ನು ಮಠಾಧಿಪತಿಯನ್ನಾಗಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಕೂಡ ಖಂಡಿಸಲಾಗಿದೆ. ಇಂಥ ನಿರ್ಣಯವನ್ನು ಸಂವರ್ಧಿನಿ ಸಭಾ ಒಪ್ಪಲು ಸಾಧ್ಯವಿಲ್ಲ ಎಂದರು.
ಸನ್ಯಾಸಿಯಾದವನು ಒಮ್ಮೆ ನಡತೆ ತಪ್ಪಿದರೆ ಮತ್ತೆ ಸನ್ಯಾಸಿಯಾಗಲು ಅವಕಾಶವೇ ಇಲ್ಲ ಎಂದು ಶಂಕರ ಸೂತ್ರಗಳೇ ಹೇಳುತ್ತವೆ. ಆದಾಗ್ಯೂ ಮಹಾಸಭೆ ಸಂವರ್ಧಿನಿ ಸಭೆ ನಿರ್ಣಯವನ್ನು ವಿರೋಧಿಸಿದ್ದು ಸರಿಯಲ್ಲ ಎಂದು ಅವರು ನುಡಿದರು.
ಅವಮಾನಕ್ಕೆ ಅಂಜಿ ಸೀತಾ ಮಾತೆಯನ್ನು ಅರಣ್ಯಕ್ಕೆ ಕಳುಹಿಸಿದ ಶ್ರೀರಾಮನಂಥ ಆದರ್ಶವನ್ನು ಮುಂದಿಟ್ಟುಕೊಂಡ ಸ್ವಾಮೀಜಿ ಅವರು, ಅವಮಾನವಾದರೆ ಇತರರ ಜೀವ ತೆಗೆಯುವ ಹಂತಕ್ಕೆ ಹೋಗುತ್ತಾರೆ ಎಂದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ ಎಂದು ಹೇಳಿದರು.
ಭಕ್ತರಲ್ಲಿ ತಮ್ಮ ತೃಷೆ ತೀರಿಸಿಕೊಳ್ಳುವವ ಗುರುವಾಗಲಾರ
ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮಾತನಾಡುತ್ತ, ಗುರುಭಕ್ತಿಯಲ್ಲಿ ಬಂದವರ ದಾಹ ನೀಗಿಸಬೇಕೇ ವಿನಾ ಭಕ್ತರಲ್ಲಿ ತಮ್ಮ ತೃಷೆ ತೀರಿಸಿಕೊಳ್ಳುವವ ಗುರುವಾಗಲಾರ. ಆಚಾರ ಅನುಸರಿಸದಿದ್ದರೆ ಶಂಕರ ಪರಂಪರೆಯ ಪೀಠದಲ್ಲಿ ಯಾವುದೇ ಸ್ವಾಮೀಜಿ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.
ಶೃಂಗೇರಿ ಜಗದ್ಗುರು ಪೀಠದ ಆಡಳಿತಾಧಿಕಾರಿ ಪದ್ಮಶ್ರೀ ವಿ.ಆರ್.ಗೌರಿಶಂಕರ, ಶಂಕರರು ಸ್ಥಾಪಿಸಿದ ಆಮ್ನ್ಯಾಯ ಪೀಠಗಳನ್ನು ಅಲಂಕರಿಸುವವರು ಯಾವ ರೀತಿ ಇರಬೇಕು ಎಂಬ ನೀತಿಗಳಿವೆ. ಆದರೆ ಅಂಥ ನಿಯಮ ಮೀರಿಯೂ ಪೀಠಾಲಂಕರಿಸುತ್ತಿದ್ದಾರೆ. ನಮ್ಮ ಗೌರವವನ್ನು ನಾವೇ ಕಡಿಮೆ ಮಾಡಿಕೊಳ್ಳುತ್ತ ಆದಿಗುರು ಶಂಕರರ ಗೌರವವನ್ನೂ ಕಡಿಮೆ ಮಾಡುತ್ತಿದ್ದಾರೆ. ಶಂಕರರು ಉಪದೇಶಿಸಿದ ತತ್ವಗಳನ್ನು ಸಮಾಜಕ್ಕೆ ನೀಡುವವರನ್ನು ಬೆಂಬಲಿಸದೇ ಶಂಕರ ಭಗವತ್ಪಾದರಿಗೆ ಅಗೌರವ ತೋರುತ್ತಿರುವವರನ್ನು ಬೆಂಬಲಿಸಲಾಗುತ್ತಿದೆ. ಧರ್ಮಾಧರ್ಮ ಒಂದೇ ವ್ಯಕ್ತಿಯಲ್ಲಿದ್ದು ಪರಾಮರ್ಶಿಸುವ ಕೆಲಸ ಅಂಥ ವ್ಯಕ್ತಿಯಿಂದ ಆಗಬೇಕು. ನಂಬಿಕೆಯೇ ಸನಾತನ ಧರ್ಮದ ಮೂಲವಾಗಿರುವಾಗ ಅಂಥ ನಂಬಿಕೆಗೆ ಧಕ್ಕೆ ನೀಡಿದವರನ್ನು ಹಿಂದೂ ಹಾಗೂ ಹವ್ಯಕ ಎಂದಿಗೂ ಒಪ್ಪಿಕೊಳ್ಳಲಾಗದು ಎಂದರು.
ವಿದ್ವಾನ್ ಜಿ. ಮಹಾಬಲೇಶ್ವರ ಭಟ್ಟ ಹಿತ್ಲಳ್ಳಿ, ವಿದ್ವಾನ್ ಅನಂತ ಶರ್ಮಾ ಭುವನಗಿರಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ ಭಟ್ಟ ಹಾಗೂ ಎಂ.ಆರ್.ಹೆಗಡೆ ಗೊಡವೆಮನೆ ಅವರನ್ನು ಸನ್ಮಾನಿಸಲಾಯಿತು.
ಧರ್ಮ ಮತ್ತು ನೈತಿಕತೆ ಇರುವವರು ಅಂತಿಮ ಜಯ ಸಾಧಿಸುತ್ತಾರೆ. ಶಂಕರರ ತತ್ವ, ತಪಶ್ಶಕ್ತಿ ತಿಳಿದವರು ಮಾತ್ರ ಸರ್ವಜ್ಞ ಪೀಠ ಏರುತ್ತಾರೆ. ಈ ಪೀಠ ದಂತಪೀಠವಾಗಲೀ, ರಾಜ ಸಿಂಹಾಸನವಾಗಲಿ ಅಲ್ಲ. ಶಂಕರರ ತತ್ವ ತಿಳಿಯದವರು ಮಾತ್ರ ಇಂಥ ಅಧಾರ್ಮಿಕ ಪೀಠ ಏರುತ್ತಾರೆ. ಹೀಗಾಗಿ ಧರ್ಮಜ್ಞರನ್ನು ಬೆಂಬಲಿಸುವ ಅಗತ್ಯತೆ ಇಂದಿನ ಸಮಾಜದ ಮೇಲಿದೆ ಎಂದು
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಮ ಭಟ್ಟ ಹೇಳಿದರು.
ಅನಾಚಾರಗಳಿಂದ ಶಿಥಿಲವಾಗುತ್ತಿರುವ ಧರ್ಮದ ನೆಲೆ ಗಟ್ಟಿಗೊಳಿಸುವುದು ಒಕ್ಕೂಟದ ಉದ್ದೇಶವೇ ವಿನಾ ಹವ್ಯಕ ಮಹಾಸಭಾದ ಸಮಕ್ಕೆ ಬೆಳೆಯುವ ಉದ್ದೇಶ ನಮ್ಮದಲ್ಲ. ಸಂವರ್ಧಿನಿ ಸಭಾ ಧರ್ಮದ ಹಾದಿಯಲ್ಲಿ ನಡೆದರೆ ಮಹಾಸಭಾ ಅದನ್ನು ಖಂಡಿಸಿದ್ದು ಧರ್ಮವನ್ನೇ ಖಂಡಿಸಿದಂತಾಗಿದೆ. ಇದನ್ನು ಎಂದೂ ಒಪ್ಪಲಾಗದು. ಧರ್ಮಯುತವಾದ ಕಾರ್ಯಕ್ರಮ ಇದಾಗಿದೆ. ಶ್ರೀಶಂಕರ ತತ್ವಗಳನ್ನು ಪ್ರಚಾರದ ಜೊತೆಗೆ ಅನುಷ್ಠಾನಕ್ಕೆ ತರಬೇಕಿದೆ ಎಂದು ಶಿವಮೊಗ್ಗ- ಒಕ್ಕೂಟದ ಉಪಾಧ್ಯಕ್ಷ
ಅಶೋಕ ಭಟ್ಟ ಹೇಳಿದರು.
ಇದೇ ವೇಳೆ ಯತಿತ್ರಯರು ಯೋಗಪ್ರಕಾಶಿಕೆ ಗ್ರಂಥ ಹಾಗೂ ಸ್ವರ್ಣ ರಥ ಸಿ.ಡಿ. ಲೋಕಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಬೆಂಗಳೂರಿನ ಅಕ್ಷರಂ ಸಂಸ್ಥೆಯ ಜನಾರ್ಧನ ಹೆಗಡೆ ದೇವದಕೇರಿ ಇದ್ದರು. ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಅಶೋಕ ಭಟ್ಟ ಶಿವಮೊಗ್ಗ ಪ್ರಾಸ್ತಾವಿಕ ಮಾತನಾಡಿದರು. ಮಹಾಬಲೇಶ್ವರ ಭಟ್ಟ ಗ್ರಂಥ ಪರಿಚಯ ಮಾಡಿದರು. ಸುರೇಶ ಹಕ್ಕಿಮನೆ ಹಾಗೂ ಕೆ.ವಿ.ಭಟ್ಟ ನಿರೂಪಿಸಿದರು. ಆರ್.ಎಸ್.ಹೆಗಡೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಮಾತೆಯರಿಂದ ಶಂಕರ ಸ್ತೋತ್ರ ಪಠಣ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ