Latest

ಅರಿಶಿನ ಬೇಸಾಯ ಮತ್ತು ಸಂಸ್ಕರಣೆ

ವಿಶೇಷ ಲೇಖನ

ಕೊಯ್ಲು: ತಳಿಗಳಿಗನುಗುಣವಾಗಿ ಅರಿಶಿನ ಬೆಳೆಯು ನಾಟಿಯಾದ (ಜನವರಿ-ಮಾರ್ಚ್ ತಿಂಗಳು) ೯ ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಅಲ್ಪಾವಧಿ ತಳಿಗಳು ೭ ರಿಂದ ೮ ತಿಂಗಳುಗಳಲ್ಲಿ, ಮಧ್ಯಮಾವಧಿ ತಳಿಗಳು ೮ ರಿಂದ ೯ ತಿಂಗಳುಗಳಲ್ಲಿ ಹಾಗೂ ಧೀರ್ಘಾವಧಿ ತಳಿಗಳು ನಾಟಿಯಾದ ೯ ತಿಂಗಳುಗಳ ನಂತರ ಕೊಯ್ಲಿಗೆ ಬರುತ್ತವೆ. ಎಲೆಗಳು ಹಳದಿಯಾಗಿ ನಕಲಿ ಕಾಂಡಗಳು ಒಣಗಿ, ಕೆಳಗೆ ಬೀಳುವವು. ನಕಲಿ ಕಾಂಡಗಳನ್ನು ಕತ್ತರಿಸಿ ತೆಗೆದು, ತೆಳುವಾಗಿ ನೀರಾವರಿ ಮಾಡಿ, ಭೂಮಿಯನ್ನು ನೇಗಿಲಿನಿಂದ ಉಳುಮೆ ಮಾಡಿ ಇಲ್ಲವಾದರೆ ಗುದ್ದಲಿಯಿಂದ ಅಗೆದು ಗೆಡ್ಡೆಗಳನ್ನು ಕೈಯಿಂದ ಆರಿಸಿ ಗುಡ್ಡೆ ಹಾಕುವರು. ನಂತರ ಗೆಡ್ಡೆಯಲ್ಲಿರುವ ಬೇರು ಮತ್ತು ಅಂಟಿಕೊಂಡಿರುವ ಮಣ್ಣನ್ನು ಸ್ವಚ್ಛ ಮಾಡಿ, ಹದ ಮಾಡುವುದಕ್ಕೆ ಸಿದ್ಧಪಡಿಸಬೇಕು.

 

ಹದ ಮಾಡುವಿಕೆ/ಸಂಸ್ಕರಣೆ: ತಾಜಾ ಅರಿಶಿನ ಗೆಡ್ಡೆಗಳಿಂದ ತಾಯಿ ಗೆಡ್ಡೆಗೆ ಅಂಟಿಕೊಂಡಿರುವ ಕೊಂಬುಗಳನ್ನು ಬೇರ್ಪಡಿಸಿ ತಾಯಿ ಗೆಡ್ಡೆಗಳನ್ನು ಬೀಜದ ಗೆಡ್ಡೆಗೆ ಬಳಸಲಾಗುವುದು. ಇದರ ಜೊತೆಗೆ ಬೀಜಕ್ಕೆ ಪ್ರಾಥಮಿಕ ಕೊಂಬುಗಳನ್ನು ಸಹ ಬಳಸಬಹುದು. ತಾಯಿ ಗೆಡ್ಡೆಯಿಂದ ಬೇರ್ಪಡಿಸಿದ ಅರಿಶಿನ ಕೊಂಬುಗಳನ್ನು ನೀರಿನಲ್ಲಿ ಬೇಯಿಸಿ ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಹದ ಮಾಡುವುದು ರೂಢಿಯಲ್ಲಿದೆ.

ಕುದಿಸುವಿಕೆ/ಬೇಯಿಸುವುದು ಸಾಂಪ್ರದಾಯಿಕ ಪದ್ಧತಿ: ನೀರಿನಿಂದ ತೊಳೆದು ಸ್ವಚ್ಛಮಾಡಿದ ಅರಿಶಿನ ಕೊಂಬುಗಳನ್ನು ಕಬ್ಬಿಣದ ಬಾಣಲೆ ಅಥವಾ ಮಡಿಕೆಯಲ್ಲಿ ತುಂಬಿ, ಅವು ಮುಳುಗುಷ್ಟು ನೀರನ್ನು ಹಾಕಬೇಕು, ನಂತರ ಉರಿ ಹಾಕಿ ಕುದಿಸಬೇಕು. ಬಿಳಿ ನೊರೆ ಬರುವ ತನಕ ೪೫-೬೦ ನಿಮಿಷಗಳ ತನಕ ಬೇಯಿಸಿ, ಕೊಂಬುಗಳು ಮೃದುವಾಗಿ ಅರಿಶಿನದ ವಾಸನೆ ಹೊತ್ತ ಹೊಗೆ ಬರಲಾರಂಭಿಸಿದಾಗ ಕುದಿಸುವುದನ್ನು ನಿಲ್ಲಿಸಬೇಕು. ಸರಿಯಾದ ಹಂತದವರೆಗೆ ಕುದಿಸುವುದರಿಂದ ಹದ ಮಾಡಿದ ನಂತರ ಉತ್ತಮ ಬಣ್ಣ ಮತ್ತು ವಾಸನೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಅತಿಯಾಗಿ ಕುದಿಸಿದಲ್ಲಿ ಅರಿಶಿನ ಕೊಂಬುಗಳ ಬಣ್ಣ ಮತ್ತು ಗುಣಮಟ್ಟ ಹಾಳಾಗುವುದು. ಸರಿಯಾದ ಹಂತಕ್ಕಿಂತ ಕಡಿಮೆ ಕುದಿಸಿದಲ್ಲಿ ಒಣಗಿಸಿದ ನಂತರ ಕೊಂಬುಗಳು ಬಿರುಸಾಗಿ ಮುಂದಿನ ಸಂಸ್ಕರಣಾ ಕ್ರಮಗಳಲ್ಲಿ ತುಂಡು ತುಂಡುಗಳಾಗುವ ಸಂಭವವಿರುತ್ತದೆ. ಆದ ಕಾರಣ ಕುದಿಸುವ ಸಮಯ ಅತೀ ಮಹತ್ವವಾದದ್ದು.

 

ಸುಧಾರಿತ ವಿಧಾನದಲ್ಲಿ ಕುದಿಸುವಿಕೆ: ಸುಧಾರಿತ ವಿಧಾನದಲ್ಲಿ ೫೦ ಕಿ.ಗ್ರಾಂ. ತೂಕದ ಅರಿಶಿನ ಗೆಡ್ಡೆಗಳನ್ನು ಹಿಡಿಯುವಂತ, ೦.೯ಮೀ ಅಥವಾ ೦.೫ಮೀ ಅಥವಾ ೦.೪ಮೀ ಗಾತ್ರದ ಜಿ.ಐ. ಅಥವಾ ಎಂ.ಎಸ್. ತಗಡಿನಿಂದ ಕೈ ಹಿಡಿಯಿರುವಂತೆ ರೂಪಿಸಿದ ಬಾಣಲೆ ಅಥವಾ ಪಾತ್ರೆಯಲ್ಲಿ ಅರಿಶಿನ ಗೆಡ್ಡೆಗಳನ್ನು ತುಂಬಾ ದೊಡ್ಡ ಬಾಣಲೆಯಲ್ಲಿ ಇಟ್ಟು ೧೦೦ ಲೀಟರ್ ನೀರನ್ನು ಗೆಡ್ಡೆ ತುಂಬಿದ ಪಾತ್ರೆಯಲ್ಲಿ ಕೊಂಬುಗಳು ಮುಳುಗುವವರೆಗೂ ಹಾಕುವರು. ನಂತರ ದೊಡ್ಡ ಪಾತ್ರೆಗೆ ಉರಿ ಹಾಕಿ ಗೆಡ್ಡೆಗಳು ಮೃದುವಾಗುವವರೆಗೆ ಕುದಿಸುವುದು. ಬೆಂದ ಕೊಂಬುಗಳನ್ನು ಹೊಂದಿರುವ ಪಾತ್ರೆಯನ್ನು ಮೇಲಕ್ಕೆ ಎತ್ತಿ ನೀರನ್ನು ದೊಡ್ಡ ಪಾತ್ರೆಯಲ್ಲೇ ಬಿಟ್ಟು, ಬೇಯಿಸಿದ ಕೊಂಬುಗಳನ್ನು ಒಣಗುವುದಕ್ಕೆ ರವಾನಿಸಿ, ಹೊಸ ಕೊಂಬುಗಳನ್ನು ಪುನಃ ಪಾತ್ರೆಯಲ್ಲಿ ತುಂಬಿ ಅದೇ ಬಿಸಿ ನೀರಿನಲ್ಲಿ ಮುಳುಗಿಸಿ ಬೇಯಿಸುವುದು. ಹೀಗೆ ೨-೩ ಬಾರಿ ಅದೇ ಬಿಸಿ ನೀರಿನಿಂದ ಹೊಸ ಗೆಡ್ಡೆಗಳನ್ನು ಬೇಯಿಸುವುದಕ್ಕೆ ಸಹಕಾರಿಯಾಗುತ್ತದೆ. ಹೀಗೆ ಕೊಯ್ಲು ಮಾಡಿದ ನಂತರ ೨-೩ ದಿವಸಗಳವರೆಗೆ ಅರಿಶಿನ ಹದ ಮಾಡುವ ಪ್ರವೃತ್ತಿ ಮುಂದುವರಿಯುತ್ತದೆ.

ದೊಡ್ಡ ಪ್ರಮಾಣದಲ್ಲಿ ನೀರಿನ ಆವಿಯ ಮುಖಾಂತರ ಕುದಿಸುವಿಕೆ: ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ, ಕೊಯಮುತ್ತೂರಿನ ಕೃಷಿ ಉತ್ಪನ್ನಗಳನ್ನು ಹದಮಾಡುವ ವಿಭಾಗವು ಒಂದು ಸಲಕ್ಕೆ ೧೫೦ ರಿಂದ ೨೫೦ ಕಿ.ಗ್ರಾಂ. ಪ್ರಮಾಣದ ಅರಿಶಿನ ಕೊಂಬುಗಳನ್ನು ಕುದಿಸುವ ಸಲಕರಣೆಯನ್ನು ವೃದ್ಧಿ ಮಾಡಿರುತ್ತಾರೆ. ಈ ಸಲಕರಣೆಯು ಅರಿಶಿನ ಬೆಳೆಗಾರರ ಪ್ರಾಂತ್ಯಗಳಲ್ಲಿ ಬಹು ಪ್ರಸಿದ್ಧತೆಯನ್ನು ಪಡೆದಿದೆ. ಈ ವಿಧಾನದಲ್ಲಿ ಪ್ರತಿ ಸಾರಿಗೆ ೨೫೦-೨೭೦ ಕಿ.ಗ್ರಾಂ. ನ್ನು ಬೇಯಿಸಬಹುದಲ್ಲದೆ ದಿನಕ್ಕೆ ೮ ಗಂಟೆಯಂತೆ ೩.೫ – ೪ ಟನ್ ಅರಿಶಿನ ಗೆಡ್ಡೆಗಳನ್ನು ಬೇಯಿಸಬಹುದು. ಇಂತಹ ತಾಂತ್ರಿಕ ಸಲಕರಣೆಯ ಒಟ್ಟು ಬೆಲೆ ಒಂದು ಲಕ್ಷ ರೂಪಾಯಿ (೨೦೦೮).

 

ಒಣಗಿಸುವಿಕೆ: ಬೇಯಿಸಿದ ಗೆಡ್ಡೆಗಳನ್ನು ಬಿದಿರಿನ ಚಾಪೆ ಅಥವಾ ಕಾಂಕ್ರಿಟ್ ನೆಲದ ಮೇಲೆ ೫-೭ ಸೆಂ. ಮೀ. ದಪ್ಪದಲ್ಲಿ ಹರಡಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಲಾಗುವುದು. ತೆಳುವಾಗಿ ಹರಡಿ ಒಣಗಿಸಿದ ಪಕ್ಷದಲ್ಲಿ ಒಣಗಿದ ನಂತರ ಗೆಡ್ಡೆಗಳ ಬಣ್ಣ ಅಪೇಕ್ಷಣೆ ರೀತಿಯಲ್ಲಿರುವುದಿಲ್ಲ. ಹಗಲಿನಲ್ಲಿ ಹರಡಿ ಒಣಗಿಸುವುದು, ರಾತ್ರಿಯ ವೇಳೆಯಲ್ಲಿ ಗುಡ್ಡೆ ಮಾಡಿ ಗಾಳಿಯಾಡುಂತೆ ಹೊದಿಕೆಯಿಂದ ಮುಚ್ಚಬೇಕು. ಗೆಡ್ಡೆಗಳು ಪೂರ್ಣ ಒಣಗಲು ೧೦-೧೫ ದಿವಸಗಳು ಬೇಕಾಗುತ್ತದೆ. ಬೇಯಿಸಿದ ಗೆಡ್ಡೆಗಳನ್ನು ಕೃತಕವಾಗಿ ಒಣಗಿಸಲು ೬೦೦ ಸೆಲ್ಷಿಯಸ್ ಉಷ್ಣಾಂಶವನ್ನು ಹೊಂದಿರುವ ಬಿಸಿ ಗಾಳಿಯನ್ನು ಹಾಯಿಸುವುದರಿಂದ ತೃಪ್ತಿಕರ ಉತ್ಪನ್ನ ದೊರೆಯುತ್ತದೆ. ಕತ್ತರಿಸಿದ ಗೆಡ್ಡೆಗಳನ್ನು ಕೃತಕ ವಿಧಾನದಿಂದ ಒಣಗಿಸುವುದರಿಂದ ತೃಪ್ತಿಕರವಾದ ಬಣ್ಣವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಬಿಸಿಲಿನಿಂದ ಒಣಗಿಸಿದ ಕೊಂಬುಗಳಲ್ಲಿ ಬದಿ ಅಂಚಿನ ಬಣ್ಣ ಬಿಳಿಚಿಕೊಳ್ಳುವುದರಿಂದ ಬರುವ ಉತ್ಪನ್ನ ಆಕರ್ಷಕವಾಗಿರುವುದಿಲ್ಲ.

ಹೊಳಪು ಕೊಡುವಿಕೆ : ಒಣಗಿಸಿದ ಅರಿಶಿನ ಕೊಂಬುಗಳು ಆಕರ್ಷಿತ ಹೊಳಪಿನಿಂದ ಕೂಡಿರದೆ ಪರೆ ಮತ್ತು ಬೇರಿನ ತುಣುಕುಗಳಿಂದ ಕೂಡಿದ್ದು ಹೊರಮೈ ಒರಟಾಗಿರುತ್ತದೆ. ಇಂತಹ ಕೊಂಬುಗಳನ್ನು ಒರಟಾಗಿರುವ ನೆಲಕ್ಕೆ ಉಜ್ಜುವುದರಿಂದ ಅಥವಾ ಗೋಣಿ ಚೀಲದಲ್ಲಿ ತುಂಬಿ ಕಾಲಿನಿಂದ ತುಳಿಯುವ ಮೂಲಕ ಪಾಲಿಂ?i ಮಾಡುವುದು ರೂಢಿಯಲ್ಲಿದೆ. ಸುಧಾರಿತ ವಿಧಾನವೆಂದರೆ ಒಣಗಿದ ಅರಿಶಿನ ಕೊಂಬುಗಳನ್ನು ಕೈಯಿಂದ ತಿರುಗಿಸುವ ಪಾಲಿಂ?i ಡ್ರಮ್ ಅಥವಾ ಕಡಾಯಿಗಳಿಗೆ ತುಂಬಿ ತಿರುಗಿಸುವುದರಿಂದ, ಡ್ರಮ್ ನಲ್ಲಿ ಅಳವಡಿಸಿರುವ ತಗಡಿನ ಜರಡಿಗೆ ಕೊಂಬುಗಳು ಉಜ್ಜುವುದರಿಂದ ಪೊರೆ, ತುಂಡು ಬೇರುಗಳು ಉದುರಿ ಹೋಗಿ ಅರಿಶಿನ ಕೊಂಬುಗಳು ನಯವಾಗುವುವು. ಈ ಕೆಲಸವನ್ನು ಯಾಂತ್ತಿಕವಾಗಿ ವಿಧ್ಯುತ್ ಚಾಲಿತ ಯಂತ್ರಗಳನ್ನು ಸಹ ಬಳಸಿ ಮಾಡಬಹುದು.
ಬಣ್ಣ ಹಾಕುವುದು: ಅರಿಶಿನ ಆಕರ್ಷಕ ಹಳದಿ ಬಣ್ಣವಿದ್ದಲ್ಲಿ ಉತ್ತಮ ಮಾರುಕಟ್ಟೆ ದರ ದೊರೆಯುತ್ತದೆ. ಆದುದರಿಂದ ಅರಿಶಿನ ಕೊಂಬುಗಳನ್ನು ಡ್ರಮ್ಮಿನಲ್ಲಿ ಪಾಲಿ?i ಮಾಡುತ್ತಿರುವಾಗ ಕೊನೆಯ ಹತ್ತು ನಿಮಿಷಗಳಲ್ಲಿ ಅರಿಶಿನ ಪುಡಿಯನ್ನು ಹಾಕಿ ತಿರುಗಿಸಬೇಕು. ಇಲ್ಲವಾದರೆ ಅರಿಶಿನ ಪುಡಿಯ ದ್ರಾವಣ ಮಾಡಿ ಡ್ರಮ್‌ನಲ್ಲಿನ ಕೊಂಬುಗಳ ಮೇಲೆ ಸಿಂಪರಣೆ ಮಾಡಿ ತಿರುಗಿಸಬೇಕು. ನಂತರ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣಗಿಸಬೇಕು.

-ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿ ಕ್ಲಿನಿಕ್, ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button