ಪ್ರಗತಿವಾಹಿನಿ ವಿಶೇಷ
ವಿಶೇಷವೆಂದರೆ ,ಈ ಬಾರಿ ಜಾತಿಗಿಂತಲೂ ಸ್ವಚ್ಛ ಇಮೇಜ್ ಹೊಂದಿರುವವರಿಗೆ ಆದ್ಯತೆ ನೀಡಲು ಪಕ್ಷ ನಿರ್ಧರಿಸಿದೆ. ಅವರು ಈವರೆಗೂ ರಾಜಕೀಯದಲ್ಲಿ ತೊಡಗಿಲ್ಲದಿದ್ದರೂ ಪರವಾಗಿಲ್ಲ, ಸಮಾಜದಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡಿರಬೇಕು. ಸೇವಾ ಮನೋಭಾವನೆಯೇ ಮೊದಲ ಆಧ್ಯತೆ ಆಗಿರಬೇಕು ಎನ್ನುವ ಸೂಚನೆ ನೀಡಲಾಗಿದೆ. ಉದ್ಯಮ ಕ್ಷೇತ್ರಗಳಲ್ಲಿರುವ, ಆರ್ಥಿಕವಾಗಿ ಬಲಾಢ್ಯರಾಗಿರುವ ಅಭ್ಯರ್ಥಿಯಾದರೆ ಉತ್ತಮ ಎನ್ನುವ ಲೆಕ್ಕಚಾರ ಪಕ್ಷದ್ದು.
ಎಂ.ಕೆ.ಹೆಗಡೆ, ಬೆಳಗಾವಿ
ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ತೀವ್ರ ಶಾಕ್ ಗೆ ಒಳಗಾಗಿರುವ ಭಾರತೀಯ ಜನತಾಪಾರ್ಟಿ, 2019ರ ಲೋಕಸಭಾ ಚುನಾವಣೆಗೆ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆಗೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಬೃಹತ್ ಆಂತರಿಕ ಸಮೀಕ್ಷೆ ಆರಂಭಿಸಿದೆ.
ಈಚೆಗೆ ನಡೆದ 5 ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ. ಎದುರಳಿಯೇ ಇಲ್ಲ ಎಂದು ಬೀಗುತ್ತಿದ್ದ ಪಕ್ಷಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಯಾವುದೇ ಕೆಲಸ ಮಾಡದ ಹಳೆಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು ಪಂಚ ರಾಜ್ಯಗಳಲ್ಲಿ ಸೋಲಲು ಪ್ರಮುಖ ಕಾರಣ ಎಂದು ಬಿಜೆಪಿಯ ಪ್ರಾಥಮಿಕ ಅವಲೋಕನದಲ್ಲಿ ಗೊತ್ತಾಗಿದೆ. ಜೊತೆಗೆ ಭ್ರಷ್ಟಾಚಾರ, ಜನರೊಂದಿಗಿನ ಅಸೌಜನ್ಯಯುತ ನಡವಳಿಕೆ ಮೊದಲಾದವು ಕೂಡ ಕಾರಣ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 2019ರ ಚುನಾವಣೆಗೆ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಸೋಲು ಖಚಿತ ಎನ್ನುವ ನಿರ್ಧಾರಕ್ಕೆ ಪಕ್ಷ ಬಂದಿದೆ. ಹಾಗಾಗಿ ಚುನಾವಣೆಯ ಸಂಪೂರ್ಣ ಹೊಣೆ ಹೊರಲು ಮುಂದಾಗಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಹಾ ಈಗಾಗಲೆ ರಾಷ್ಟ್ರಾದ್ಯಂತ ಆಂತರಿಕ ಸಮೀಕ್ಷೆ ಶುರು ಮಾಡಿದ್ದಾರೆ. ಕೇವಲ ಮೋದಿ ಅಲೆಯನ್ನಷ್ಟೆ ನಂಬಿಕೊಂಡಿದ್ದರೆ ಈ ಬಾರಿ ಕಷ್ಟವಿದೆ ಎನ್ನುವ ಸ್ವಷ್ಟ ತೀರ್ಮಾನಕ್ಕೆ ಪಕ್ಷ ಬಂದಿದೆ. ಕಳೆದ 2-3 ಚುನಾವಣೆಗಳಲ್ಲಿ ಸ್ವಂತ ಶಕ್ತಿ ಮೇಲೆ ಆಯ್ಕೆಯಾಗದೆ ಅಲೆಗಳ ಮೇಲೆ ಗೆದ್ದವರನ್ನು ಈ ಬಾರಿ ಮುಲಾಜಿಲ್ಲದೆ ದೂರವಿಡಲು ನಿರ್ಧರಿಸಲಾಗಿದೆ. ಈ ಬಾರಿ ಅಲೆಗಳು ಕೆಲಸ ಮಾಡುವುದಿಲ್ಲ ಎನ್ನವುದು ಸಮೀಕ್ಷೆಯಿಂದ ಸ್ಪಷ್ಟವಾಗಿದೆ.
ಅನೇಕ ಕ್ಷೇತ್ರಗಳಲ್ಲಿ ಸಂಸದರು ಜನರೊಂದಿಗೆ ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ, ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ, ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಿ. ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿಲ್ಲ ಎನ್ನುವ ದೂರು ಬಂದಿದೆ. ಅನೇಕ ಕಡೆ ಸಂಸದರು ಭ್ರಷ್ಟಾಚಾರದಲ್ಲಿ ತೊಡಗಿರುವುದು, ಸಮಾಜಿಕ ಕೆಲಸಕ್ಕಿಂತ ಹೆಚ್ಚಾಗಿ ಸ್ವಹಿತಾಸಕ್ತಿಯ ಕೆಲಸಕ್ಕೆ ಆದ್ಯತೆ ನೀಡಿದ್ದಾರೆ. ಈ ಬಾರಿ ಅದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆ ಕ್ಷೇತ್ರವನ್ನು ಕಳೆದುಕೊಳ್ಳುವುದು ಖಚಿತ. ಮೋದಿ ಸರಕಾರ ಎಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ ಒಳ್ಳೆಯ ಅಭ್ಯರ್ಥಿಯನ್ನು ನೀಡದಿದ್ದರೆ ಜನ ಮುಲಾಜಿಲ್ಲದೆ ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು ಎನ್ನುವುದು ಪಕ್ಷಕ್ಕೆ ಗೊತ್ತಾಗಿದೆ.
ಕಳೆದ ಚುನವಣೆಯಲ್ಲಿ ಮೋದಿ ಅಲೆ, ಪಕ್ಷ ಸಂಘಟನೆ ಗೆಲುವು ತಂದುಕೊಟ್ಟಿತ್ತು. ಅದರೊಂದಿಗೆ ಈ ಬಾರಿ ಕಾಂಗ್ರೆಸ ಸೇರಿದಂತೆ ವಿರೋಧ ಪಕ್ಷಗಳ ವೈಫಲ್ಯ ಮತ್ತು ಮೋದಿ ಸರಕಾರದ ಸಾಧನೆ ಪ್ಲಸ್ ಆಗಿದೆ ಎಂದೇ ಬಾವಿಸಲಾಗಿತ್ತು. ಆದರೆ ಅದು ಸುಳ್ಳು ಎನ್ನುವುದು ಈ ಸಾಭೀತಾಗಿದೆ. ವಿಧಾನಸಭೆ ಚುನಾವಣೆಗೂ ಲೋಕಸಭಾ ಚುನಾವಣೆಗೂ ಜನರ ತೀರ್ಪು ಬೇರೆಯಾಗಲಿದೆ ಎನ್ನುವ ಭಾವನೆ ಒಂದು ಕಡೆ ಇದ್ದರೂ ಸರಳವಾಗಿ ತೆಗೆದುಕೊಳ್ಳದಿರಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರದ ಎಲ್ಲ 545 ಲೋಕಸಭಾ ಕ್ಷೇತ್ರಗಳಲ್ಲೂ ಆಂತರಿಕ ಸಮೀಕ್ಷೆ ಕೈಗೊಳ್ಳಲು ಅಮಿತ ಶಹಾ ಬಿಜೆಪಿಯ ಸಹಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಅವು ತಮ್ಮ ಸದಸ್ಯರನ್ನು ಕಳುಹಿಸಿ ಬದಲಿಸಬೇಕಾದ ಅಭ್ಯರ್ಥಿಗಳ ಕುರಿತು ಮೊದಲ ಹಂತದ ಮಾಹಿತಿ ಸಲ್ಲಿಸಲಿದೆ. ಜೊತೆಗೆ ಬದಲಿ ಅಭ್ಯರ್ಥಿ ಯಾರಾಗಬಹುದು ಎನ್ನುವ ಕುರಿತು ಸಹ ಸಲಹೆ ನೀಡಲಿದೆ.
ಹೇಗಿರಬೇಕು?:
ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಬದಲಿಸಬೇಕಾದ ಕ್ಷೇತ್ರಗಳ ಪಟ್ಟಿ ಮಾಡಲಿದ್ದು, ಅಂತಹ ಕ್ಷೇತ್ರಗಳಿಂದ ಅರ್ಹರಾದ 3 ಜನರ ಹೆಸರನ್ನು ಸೂಚಿಸಲು ಸಹ ಸಮೀಕ್ಷಕರಿಗೆ ಸೂಚಿಸಲಾಗಿದೆ. ಅವರಿಗೆ ಕೆಲವು ಅರ್ಹತೆಗಳನ್ನೂ ಪಕ್ಷ ನಿಗದಿಪಡಿಸಿದೆ.
ವಿಶೇಷವೆಂದರೆ ಈ ಬಾರಿ ಜಾತಿಗಿಂತಲೂ ಸ್ವಚ್ಛ ಇಮೇಜ್ ಹೊಂದಿರುವವರಿಗೆ ಆದ್ಯತೆ ನೀಡಲು ಪಕ್ಷ ನಿರ್ಧರಿಸಿದೆ. ಅವರು ಈವರೆಗೂ ರಾಜಕೀಯದಲ್ಲಿ ತೊಡಗಿಲ್ಲದಿದ್ದರೂ ಪರವಾಗಿಲ್ಲ, ಸಮಾಜದಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡಿರಬೇಕು. ಸೇವಾ ಮನೋಭಾವನೆಯೇ ಮೊದಲ ಆಧ್ಯತೆ ಆಗಿರಬೇಕು ಎನ್ನುವ ಸೂಚನೆ ನೀಡಲಾಗಿದೆ. ಉದ್ಯಮ ಕ್ಷೇತ್ರಗಳಲ್ಲಿರುವ, ಆರ್ಥಿಕವಾಗಿ ಬಲಾಢ್ಯರಾಗಿರುವ ಅಭ್ಯರ್ಥಿಯಾದರೆ ಉತ್ತಮ ಎನ್ನುವ ಲೆಕ್ಕಚಾರ ಪಕ್ಷದ್ದು.
ಈಗ ಸಮೀಕ್ಷೆ ಆರಂಭಿಸಿರುವ ತಂಡ ಯಾವ ಒತ್ತಡಗಳಿಗೂ ಮಣಿಯದೆ ಪಕ್ಷಕ್ಕೆ ತನ್ನ ವರದಿ ಸಲ್ಲಿಸಲಿದೆ. ಬೇರೆ ಬೇರೆ ಹಂತದಲ್ಲಿ, ಅಗತ್ಯವಾದರೆ ಗುಪ್ತ ಮಾಹಿತಿ ಸಂಗ್ರಹದ ಮೂಲಕವೂ ಸಮೀಕ್ಷೆ ನಡೆಸಲಾಗುತ್ತಿದೆ. ಸಂಘ ಪರಿವಾರ, ಎಬಿವಿಪಿ, ಯಾವ ಸ್ವಾರ್ಥವೂ ಇಲ್ಲದೆ ಪಕ್ಷ ರಹಿತವಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವ ಜನರೊಂದಿಗೆ ಸಮೀಕ್ಷಾ ತಂಡ ವಿವಿಧ ಹಂತದಲ್ಲಿ ಸಮೀಕ್ಷೆ ನಡೆಸುತ್ತಿದೆ. ಈ ತಿಂಗಳಾಂತ್ಯದೊಳಗೇ ಮೊದಲ ಹಂತದ ವರದಿ ಸಲ್ಲಿಸುವಂತೆ ಅಮಿತ ಶಹ ಸೂಚನೆ ನೀಡಿದ್ದಾರೆ. ಆ ವರದಿ ಕೈ ತಲುಪಿದ ನಂತರ ಎರಡನೇ ಹಂತದ ಸಮೀಕ್ಷೆ ನಡೆಸಲಿದ್ದಾರೆ. ಎರಡನೆ ಹಂತದಲ್ಲಿ ಮತ್ತಷ್ಟು ಆಳವಾಗಿ ಅಧ್ಯಯನ ಮಾಡಲಾಗುತ್ತದೆ. ಆ ಹೊತ್ತಿಗೆ ಬದಲಿ ಅಭ್ಯರ್ಥಿಯ ಕುರಿತು ಸಹ ಸ್ಪಷ್ಟತೆ ಬರಬೇಕು ಎನ್ನುವ ಸೂಚನೆ ನೀಡಿದ್ದಾರೆ.
ಒಟ್ಟಾರೆ ಈ ಬಾರಿ ಬಿಜೆಪಿ ಕೇವಲ ಮೋದಿ ಅಲೆಯನ್ನು ನೆಚ್ಚಿಕೊಳ್ಳದೆ, ತಾನು ಮಾಡಿದ ಅವೃದ್ದಿ ಕಾರ್ಯಗಳಿಂದಲೇ ಜನ ಮತ ನೀಡಲಿದ್ದಾರೆ ಎನ್ನುವುದನ್ನು ನಂಬಿಕೊಳ್ಳದೆ ಅಭ್ಯರ್ಥಿ ಎಲ್ಲ ದೃಷ್ಟಿಕೋನದಂದಲೂ ಸಮರ್ಥವಾಗಿರಬೇಕು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ