Latest

ಉತ್ತಮ ಜ್ಞಾನ ಹೊಂದಿರುವ ವಕೀಲರು ಧನಾತ್ಮಕ ಸುಧಾರಣೆ ತರಬಲ್ಲರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪರಸ್ಪರ ಸಹಕಾರದಿಂದ ಸ್ಪರ್ಧೆಗಳನ್ನು ಆಯೋಜಿಸಿದರೆ ಆರೋಗ್ಯಪೂರ್ಣವಾಗಿರಲಿದೆ  ಎಂದು ನ್ಯಾಷನಲ್ ಲಾ ಸ್ಕೂಲ್, ಬೆಂಗಳೂರಿನ ಹಾಗೂ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃಧ್ಧಿ ಇಲಾಖೆಯ ಬೌದ್ಧಿಕ ಸ್ವತ್ತುಗಳ ಹಕ್ಕುಗಳ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಟಿ. ರಾಮಕೃಷ್ಣ ಹೇಳಿದರು.
ಅವರು ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಎಂ. ಕೆ. ನಂಬ್ಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ 2019ನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಅವರು ಎಮ್. ಕೆ. ನಂಬ್ಯಾರರ ಜೀವನ ಮತ್ತು ಸಾಧನೆಗಳನ್ನು ವರ್ಣಿಸಿ, ಉತ್ತಮ ಜ್ಞಾನವನ್ನು ಹೊಂದಿದ ಪರಿಶ್ರಮಿ ಹಾಗೂ ಪ್ರಾಮಾಣಿಕರಾದ ವಕೀಲರು ಕಾನೂನಿನ ಕ್ಷೇತ್ರದಲ್ಲಿ ಧನಾತ್ಮಕ ಸುಧಾರಣೆಗಳನ್ನು ತರುವಲ್ಲಿ ಮಹತ್ತರ ಪಾತ್ರವನ್ನು ಹೊಂದುತ್ತಾರೆ ಎಂದರು.
ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಭಾರತದ ಹಾಲಿ ಅಟಾರ್ನಿ ಜನರಲ್ ಪ್ರಖ್ಯಾತ ವಕೀಲ ಪದ್ಮವಿಭೂಷಣ ಕೆ. ಕೆ. ವೇಣುಗೋಪಾಲ ರೂ. ೩೦ ಲಕ್ಷಗಳ ನಿಧಿಯನ್ನು ಸ್ಥಾಪಿಸಿದ್ದು ಅದರ ಬಡ್ಡಿ ಹಾಗೂ ಕರ್ನಾಟಕ ಕಾನೂನು ಸಂಸ್ಥೆಯ ಆಡಳಿತ ಮಂಡಳಿಯ ವಂತಿಗೆಯ ಸಹಾಯದಿಂದ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯವು ಕೆ. ಕೆ. ವೇಣುಗೋಪಾಲರ ತಂದೆ ಖ್ಯಾತ ವಕೀಲರೂ ಸಂವಿಧಾನ ತಜ್ಞರೂ ಆಗಿದ್ದ ಎಂ.ಕೆ. ನಂಬ್ಯಾರರ ನೆನಪಿಗಾಗಿ ಅವರ ಹೆಸರಿನಲ್ಲಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.
ಕರ್ನಾಟಕ ಕಾನೂನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ, ಬೆಳಗಾವಿಯ ಖ್ಯಾತ ವಕೀಲ ಎಂ. ಆರ್. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ದೇಶದ ವಿವಿಧ ರಾಜ್ಯಗಳ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮಾಡುವ ಸ್ಪರ್ಧೆಗಾಗಿ ಅವರು ಮಾಡುವ ಪೂರ್ವಸಿದ್ಧತೆ ಹಾಗೂ ಸಂಶೋಧನೆಗಳನ್ನು ಮತ್ತು ಅದರ ಹಿಂದಿರುವ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಶುಭಾಂಗಿ ಬಿರಜದಾರ್ ಸಭೆಯನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಂ. ಆರ್. ಕುಲಕರ್ಣಿ ಮುಖ್ಯ ಅತಿಥಿಗಳಾದ ಟಿ. ರಾಮಕೃಷ್ಣ ಅವರನ್ನು ಗೌರವಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಧ್ಯಾ ಎಚ್. ವ್ಹಿ. ಸಭೆಯ ಅಧ್ಯಕ್ಷ ಎಂ. ಆರ್. ಕುಲಕರ್ಣಿಯವರನ್ನು ಗೌರವಿಸಿದರು.
ಹರ್ಷಾ ವಾಘ್ ಸಭೆಗೆ ಸ್ಪರ್ಧೆಯ ಕಿರುಪರಿಚಯವನ್ನು ಮಾಡಿಕೊಟ್ಟರು. ಸ್ನೇಹಾ ರೇವಣಕರ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಸಂಚಾಲನೆಯನ್ನು ಪೂಜಾ ಓಝಾ ನಿರ್ವಹಿಸಿದರು.
ಸ್ಪರ್ಧೆಯಲ್ಲಿ 19 ತಂಡಗಳ 57 ಜನ ಸ್ಪರ್ಧಿಗಳು ಭಾಗವಹಿಸಿದ್ದಾರೆ.

 

Home add -Advt

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ ಶೇರ್ ಮಾಡಿ)

Related Articles

Back to top button