ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲು ಸೀಮೆ ಅಭಿವೃದ್ದಿ ಮಂಡಳಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಶಾಸಕರ ಸಭೆ ಆಯಿತು
ಪ್ರಗತಿವಾಹಿನಿ ವಿಶೇಷ, ಬೆಳಗಾವಿ
ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಆರಂಭದಿಂದಲೂ ಉತ್ತರ ಕರ್ನಾಟಕದ ಬಗೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುವುದಕ್ಕೆ ಈಗ ಮತ್ತಷ್ಟು ಪುಷ್ಠಿ ಸಿಗುತ್ತಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಳದ ಅಧಿವೇಶನದ ವೇಳೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲು ಸೀಮೆ ಅಭಿವೃದ್ದಿ ಮಂಡಳಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಶಾಸಕರ ಸಭೆ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರಕರ್ನಾಟಕದ ಶಾಸಕರ ಸಭೆ ಕರೆಯುವ ಯಾವ ಪ್ರಸ್ತಾವನೆಯನ್ನೂ ಇಟ್ಟಿಲ್ಲ.
ಕಳೆದ 3 ದಿನದಿಂದ ಒಂದೋಂದೇ ಬ್ಯಾಚ್ ಆಗಿ ಶಾಸಕರ ಸಭೆ ನಡೆಸಿ ಅವರಿಗೆ ಕೊಡಲಾಗುತ್ತಿದ್ದ ಅನುದಾನವನ್ನು ಹೆಚ್ಚಿಸುವ ಭರವಸೆ ನೀಡಿದ್ದಾರೆ. ಆದರೆ ಉತ್ತರ ಕರ್ನಾಟಕ್ಕೆ ಮಾತ್ರ ಯಾವ ನೆರವೂ ದೊರೆಯುವ ಸಾಧ್ಯತೆ ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ಕಾಟಾಚಾರಕ್ಕೆಂಬಂತೆ ಅಧಿವೇಶನ ನಡೆಯುತ್ತಿದ್ದು, ಈ ಭಾಗದ ಯಾವ ಸಮಸ್ಯೆಗಳ ಕುರಿತೂ ಚರ್ಚೆ ನಡೆಯುತ್ತಿಲ್ಲ. ರೈತರ ಸಮಸ್ಯೆಯನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆಳಗಾವಿ ಅಧಿವೇಶನದ ವೇಳೆಯಲ್ಲೇ ಉತ್ತರ ಕರ್ನಾಟಕದವರಾದ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾದ ಬೆನ್ನಲ್ಲೆ ಈ ಘಟನೆಯೂ ನಡೆಯಿತು.
ಬೆಳಗಾವಿ ಶಾಸಕ ಅಭಯ ಪಾಟೀಲ ಬೆಳಗಾವಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಖಾಸಗಿ ನಿರ್ಣಯ ಮಂಡಿಸಲು ಯತ್ನಿಸಿ ವಿಫಲರಾಗಿದ್ದಾರೆ. ಹಾಗಾಗಿ ಅವರು ಶುಕ್ರವಾರ ಧರಣಿಯನ್ನೂ ನಡೆಸಿದ್ದಾರೆ.
ಈ ಭಾಗದ ಜನಪ್ರತಿನಿಧಿಗಳ ಒಗ್ಗಟ್ಟಿನ ಕೊರತೆಯೇ ಸರಕಾರಕ್ಕೆ ವರವಾದಂತೆ ಕಾಣುತ್ತಿದ್ದು, ದಕ್ಷಿಣ ಕರ್ನಾಟಕಕ್ಕೆ ನೀಡಲಾಗುತ್ತಿರುವ ಯಾವುದೇ ಪ್ರಾತಿನಿಧ್ಯ, ಅನುಧಾನ ಉತ್ತರ ಕರ್ನಾಟಕಕ್ಕೆ ಸಿಗುತ್ತಿಲ್ಲ. ಅಧಿವೇಶನಕ್ಕೆ ಮುನ್ನ ಇಲ್ಲಿಯ ಜನಪ್ರತಿನಿಧಿಗಳೆಲ್ಲ ಸಭೆ ಸೇರಿ ಸರಕಾರದ ಮುಂದೆ ಬೇಡಿಕೆಗಳ ಪಟ್ಟಿ ಮಂಡಿಸುವಲ್ಲೂ ವಿಫಲರಾಗಿದ್ದಾರೆ.
ಇದೇ ರೀತಿ ಬೆಳವಣಿಗೆ ಮುಂದುವರಿದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಸರಕಾರವೇ ಕಾರಣವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿಗಳು ಮುಂದಿನ ವಾರವಾದರೂ ಉತ್ತರಕರ್ನಾಟಕದ ಶಾಸಕರ ಸಬೆ ಕರೆದು ಬೇಡಿಕೆಗಳನ್ನು ಆಲಿಸುವರೇ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ