Kannada NewsKarnataka NewsLatest

*ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ನಾಳೆ ಪರೀಕ್ಷಾ ಕೇಂದ್ರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳ ಬಳಿ ಕರವೇ ಪ್ರತಿಭಟನೆ*

ನಾರಾಣಗೌಡ ಕರೆ

Home add -Advt


ಪ್ರಗತಿವಾಹಿನಿ ಸುದ್ದಿ:
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಏನೂ ಮಾಡಲಾಗದ ಅಸಹಾಯಕತೆಗೆ ಸಿಲುಕಿರುವ ರಾಜ್ಯದಿಂದ ನೇಮಕಗೊಂಡ ಕೇಂದ್ರ ಸಚಿವರುಗಳು ರಾಜೀನಾಮೆ ಎಸೆದು ಹೊರಬನ್ನಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ, ಆಹಾರ ಸರಬರಾಜು-ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಉಲ್ಲೇಖಿಸಿ ಮಾತನಾಡಿದ ಅವರು ನೀವೆಲ್ಲರೂ ದೊಡ್ಡ ದೊಡ್ಡ ಹುದ್ದೆಗಳನ್ನು ನಿಭಾಯಿಸಿದ ಹಿರಿಯರು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಆ ಸ್ಥಾನದಲ್ಲಿ ಇರುವುದು ಒಳಿತಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ಕನ್ನಡಿಗರು. ಅವರ ಋಣವನ್ನು ತೀರಿಸಿ ಎಂದು ಹೇಳಿದರು.

ನೀವು ಗಟ್ಟಿಯಾದ ತೀರ್ಮಾನ ತೆಗೆದುಕೊಂಡು ಸಾಮೂಹಿಕ ರಾಜೀನಾಮೆ ಕೊಟ್ಟು ಹೊರಬನ್ಜಿ. ಆಗ ನಿಮ್ಮ ಮಾತುಗಳನ್ನು ಕೇಂದ್ರ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಹಿಂದಿವಾಲಾಗಳು ಆಲಿಸುತ್ತಾರೆ. ಇಲ್ಲವಾದಲ್ಲಿ ನಿಮ್ಮ ಇದೇ ಅಸಹಾಯಕತೆ ಮುಂದುವರೆಯುತ್ತದೆ. ಇದೇ ಅನ್ಯಾಯ ತಮಿಳುನಾಡಿನ ಜನರಿಗೆ ಆಗಿದ್ದರೆ ಅಲ್ಲಿನ ಸಂಸದರು ಸುಮ್ಮನೆ ಇರುತ್ತಿದ್ದರೆ ಎಂದು ಅವರು ಪ್ರಶ್ನಿಸಿದರು.

ನೈರುತ್ಯ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡವನ್ನು ಹೊರಗಿಟ್ಟು ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವ ರೈಲ್ವೆ ಪರೀಕ್ಷಾ ಮಂಡಳಿಯ ಕ್ರಮವನ್ನು ಖಂಡಿಸಿ ಮಾಧ್ಯಮಗೋಷ್ಠಿ ನಡೆಸಿದ ಅವರು, ನಾಳೆ (17-3-2026)ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಬೇಕಿರುವ ಪದೋನ್ನತಿ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ನೇರವಾಗಿ ಎಚ್ಚರಿಸಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ವಿಭಾಗೀಯ ಕಚೇರಿ ಮುಂದೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ನಿಗದಿಯಂತೆ ನಡೆಯುತ್ತದೆ. ಪ್ರತಿಭಟನೆ ನಡೆಸದಂತೆ ಕಾಟನ್‌ ಪೇಟೆ ಪೊಲೀಸರು ನೀಡಿರುವ ನೋಟಿಸ್‌ ಗೆ ನಾವು ಅಂಜುವುದಿಲ್ಲ. ಇನ್ನೂ ನೂರು ನೋಟೀಸ್‌ ಕೊಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕನ್ನಡದ ಮಕ್ಕಳ ಭವಿಷ್ಯ ಆತಂಕದಲ್ಲಿರುವಾಗ ನಾವು ಸುಮ್ಮನೆ ಕೂರುವುದಿಲ್ಲ. ನಮ್ಮನ್ನು ಜೈಲಿಗೆ ಕಳುಹಿಸಿದರೂ ಚಿಂತೆಯಿಲ್ಲ. ಈ ಬಾರಿ ಜೈಲಿನಲ್ಲೇ ಯುಗಾದಿ ಆಚರಿಸುತ್ತೇವೆ ಎಂದು ಅವರು ನುಡಿದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿ ಎನ್ನುತ್ತಾರೆ. ಅಲ್ಲಿ ಪ್ರತಿಭಟನೆ ಮಾಡಿದರೆ, ಪೊಲೀಸರ ಮುಖವನ್ನು ನಾವು, ನಮ್ಮ ಮುಖವನ್ನು ಪೊಲೀಸರು ನೋಡಿಕೊಂಡು ಕುಳಿತಿರಬೇಕು. ದಪ್ಪ ಚರ್ಮದ ರೈಲ್ವೆ ಅಧಿಕಾರಿಗಳಿಗೆ ನಮ್ಮ ಕೂಗು ತಲುಪುತ್ತದೆಯೇ? ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲೇ ನಾವು ಹುಡುಕಬೇಕು. ಎಲ್ಲಿ ಅನ್ಯಾಯವಾಗಿದೆಯೋ ಅಲ್ಲೇ ಮಾತನಾಡಬೇಕು. ಹೀಗಾಗಿ ಅಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

2008ರಲ್ಲಿ 4000ಕ್ಕೂ ಡಿ ದರ್ಜೆ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಎಲ್ಲ ಹುದ್ದೆಗಳಿಗೆ ಬಿಹಾರಿಗಳನ್ನು ತುಂಬುವ ಹುನ್ನಾರ ನಡೆದಿತ್ತು. ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿ ಈ ಹುನ್ನಾರವನ್ನು ತಡೆದಿತ್ತು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ದೊರೆತಿತ್ತು. ಆದರೆ ಮತ್ತೆ ಪರೀಕ್ಷೆಗಳಿಂದ ಕನ್ನಡವನ್ನು ಕೈಬಿಟ್ಟು ಹಿಂದಿ, ಇಂಗ್ಲಿಷ್‌ ನಲ್ಲಿ ನಡೆಸಲಾಗುತ್ತಿದೆ. ಹಿಂದಿವಾಲಾಗಳಿಗೆ, ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ನಾಳೆ ಪರೀಕ್ಷೆ ನಿಗದಿಯಾಗಿರುವ ಹುಬ್ಬಳ್ಳಿ ಮತ್ತು ಬೆಂಗಳೂರು ಪರೀಕ್ಷಾ ಕೇಂದ್ರಗಳ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ನಂತರ ಆಗುವ ಎಲ್ಲ ಅನಾಹುತಗಳಿಗೆ ರೈಲ್ವೆ ಇಲಾಖೆಯೇ ಹೊಣೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ನಮ್ಮನ್ನು ದೂರಬೇಡಿ ಎಂದು ಅವರು ಹೇಳಿದರು.

Related Articles

Back to top button