Latest

ಎರಡು ಅಂತಸ್ತಿನ ಕಟ್ಟಡಗಳಿಗೆ ಸ್ವಯಂ ಪ್ರಮಾಣೀಕರಣವೇ ಸಾಕು

  ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಯಾವುದೇ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,130 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ನೆಲಮಹಡಿ ಮತ್ತು ಎರಡು ಅಂತಸ್ತಿನ ಕಟ್ಟಡಗಳಿಗೆ ಇನ್ನು ಮುಂದೆ ಸ್ವಯಂ ಪ್ರಮಾಣೀಕರಣವೇ ಸಾಕು.

ವಸತಿಟ್ಟಡ ನಿರ್ಮಾಣ ಅನುಮತಿ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಕರ್ನಾಟಕ ನಗರ ಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ-2017 ನಿಯಮ ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಸ್ವಯಂ ಪ್ರಮಾಣೀಕರಣ ಎಂದರೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಕೊಡುವ ಅಧಿಕಾರವು ಸರ್ಕಾರದಿಂದ ಮಾನ್ಯತೆ ಪಡೆದ ಆರ್ಕಿಟೆಕ್ಟ್ ಎಂಜಿನಿಯರ್ ಅಥವಾ ಕಟ್ಟಡ ವಿನ್ಯಾಸ ಸಲಹೆಗಾರರಿಗೇ ದೊರೆಯುತ್ತದೆ. ಈವರೆಗೂ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡುವ ಅಧಿಕಾರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಗರ ಯೋಜನಾ ವಿಭಾಗದ ಅಧಿಕಾರಿಗಳ ಕೈಯಲ್ಲಿತ್ತು. 
ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ನಗರ ಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ-2017 ರ ಕರಡು ಪ್ರತಿಯನ್ನು ಕಳೆದ ಜುಲೈ ತಿಂಗಳಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿತ್ತು. ಇದೀಗ ಅಂತಿಮ ಆದೇಶ ಹೊರಡಿಸಿದ್ದು, ಬೈಲಾ ಜಾರಿಯಿಂದಾಗಿ ಬೆಂಗಳೂರು ಸೇರಿ 11 ನಗರ ಪಾಲಿಕೆ ಹಾಗೂ 275 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 105 ಚ.ಮೀ ಗಿಂತ ಕಡಿಮೆ ಅಳತೆಯ ನಿವೇಶನದಲ್ಲಿ ನಿರ್ಮಿಸುವ ಅತಿ ಕಡಿಮೆ ರಿಸ್ಕ್ ಹೊಂದಿರುವ ನೆಲ ಅಂತಸ್ತು ಮತ್ತು ಗರಿಷ್ಠ ಎರಡು ಅಂತಸ್ತಿನ ವಸತಿ ಕಟ್ಟಡಗಳು ಹಾಗೂ 105 ಚ.ಮೀ ನಿಂದ 500 ಚ.ಮೀ ವರೆಗಿನ ವಿಸ್ತೀರ್ಣದ ಕಡಿಮೆ ರಿಸ್ಕ್ ಹೊಂದಿರುವ ನೆಲ ಮಹಡಿ ಕಟ್ಟಡ ಕಟ್ಟಲು ಅರ್ಜಿ ದಾರರು ಸ್ವಯಂ ಪ್ರಮಾಣೀಕರಿಸಿದರೆ ಸಾಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button