*ಒಂದೇ ಮನೆಯಲ್ಲಿ ಇಬ್ಬರು ಸಹೋದರರ ಪತ್ನಿಯರ ಕೊಲೆ*: *ಪೊಲೀಸರ ಮುಂದೆ ಕಥೆ ಕಟ್ಟಿದ್ದ ನಾಲ್ವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಇಬ್ಬರು ಮಹಿಳೆಯರು ನಿಗೂಢವಾಗಿ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಟ ನಡೆಸುತ್ತಿದ್ದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ ಪೊಲೀಸರ ತನಿಖೆಯಲ್ಲಿ ಹೊರಬಂದ ಸತ್ಯ ಬೆಚ್ಚಿಬೀಳಿಸುವಂತಿತ್ತು. ಇಬ್ಬರು ಸಹೋದರರೇ ತಮ್ಮ ಪತ್ನಿಯರನ್ನು ಹತ್ಯೆ ಮಾಡಿದ್ದರು. ಅಷ್ಟೇ ಅಲ್ಲ, ಮೃತದೇಹಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಬಳಸಿದ್ದರು. ಈ ಭೀಕರ ಪ್ರಕರಣದಲ್ಲಿ ಇಬ್ಬರು ಸಹೋದರರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಈಗ ಪೊಲೀಸರ ವಶದಲ್ಲಿದ್ದಾರೆ.
ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಶಿವಶಂಕರ್ ಸಾಹು ಮತ್ತು ಅವರ ಸಹೋದರ ನವೀನ್ ಸಾಹು ಎಂದು ಗುರುತಿಸಲಾಗಿದೆ. ಶಿವಶಂಕರ್ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರೂ ತಮ್ಮ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಅವರನ್ನು ಸೋಮವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಇಬ್ಬರು ಮಹಿಳೆಯರ ಮೃತದೇಹಗಳನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸಿ, ನೆರೆಯ ಸಿಮ್ಡೆಗಾ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಮಹಿಳೆಯರ ನಡುವೆ ಬಹಳ ದಿನಗಳಿಂದ ಮನಸ್ತಾಪ ಮತ್ತು ವಿವಾದವಿತ್ತು. ಈ ವಿಚಾರದಿಂದ ಸಹೋದರರು ಕೋಪಗೊಂಡಿದ್ದರು ಎನ್ನಲಾಗಿದೆ. ಆದರೆ, ಹತ್ಯೆ ನಡೆಯುವುದಕ್ಕೆ ಕೇವಲ ಎರಡು ದಿನಗಳ ಮೊದಲು ಇಬ್ಬರು ಮಹಿಳೆಯರು ಪರಸ್ಪರ ರಾಜಿ ಮಾಡಿಕೊಂಡಿದ್ದರು ಎಂಬ ಅಂಶವೂ ತನಿಖೆಯಲ್ಲಿ ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮಹಿಳೆಯರ ಕುಟುಂಬದವರು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆಗ ಎಲ್ಲವೂ ಸಹಜವಾಗಿಯೇ ಇತ್ತು ಎಂದು ಗುಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಸ್ ಬಿನ್ ಜಮಾ ತಿಳಿಸಿದ್ದಾರೆ.
ಮಹಿಳೆಯರು ಕಾಣೆಯಾಗಿರುವ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದಾಗ, ಸಹೋದರರು ಆರಂಭದಲ್ಲಿ ತಮ್ಮ ಪತ್ನಿಯರು ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋಗಿದ್ದಾರೆ ಎಂದು ಹೇಳಿದ್ದರು. ಆದರೆ, ಪೊಲೀಸರ ನಿರಂತರ ವಿಚಾರಣೆಯ ಬಳಿಕ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ಸಾಗಿಸಲು ಬಳಸಿದ ಆಂಬ್ಯುಲೆನ್ಸ್ ಕೂಡ ವಶಕ್ಕೆ ಪಡೆಯಲಾಗಿದೆ. ಇಬ್ಬರು ಸಹೋದರರ ಜೊತೆಗೆ ಅವರ ತಂದೆ ಸಮೇಶ್ವರ ಸಾಹು ಮತ್ತು ತಾಯಿ ತಿಲೇಶ್ವರಿ ದೇವಿಯನ್ನೂ ಬಂಧಿಸಲಾಗಿದೆ.
ಒಂದೇ ಕುಟುಂಬದ ನಾಲ್ವರು ಬಂಧನಕ್ಕೊಳಗಾಗಿದ್ದು, ಮಹಿಳೆಯರ ಹತ್ಯೆಗೆ ನಿಖರ ಕಾರಣವೇನು ಮತ್ತು ಈ ಕೃತ್ಯದಲ್ಲಿ ಪ್ರತಿಯೊಬ್ಬರ ಪಾತ್ರ ಏನು ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

