ಪ್ರಗತಿವಾಹಿನಿ ಸುದ್ದಿ, ಗೋಕಾಕ
ಸ್ಥಳೀಯ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು, ವೃದ್ಧರು ಕಣ್ಣಿರು ಸುರಿಸುತ್ತ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸೋಮವಾರ ಪೇಠೆಯಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದ ಕಾರ್ಯಾಲಯದ ಮುಂದೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಮಾಯಿಸಿದ ಠೇವಣಿದಾರರು ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಠೇವಣಿದಾರರು ಅವಧಿ ಮುಗಿದರೂ ಹಣ ಪಾವತಿಸುತ್ತಿಲ್ಲ ಎಂದು ವೃದ್ಧರು ಆರೋಪಿಸಿ ಮಾಧ್ಯಮದವರ ಎದುರು ಕಣ್ಣಿರು ಸುರಿಸಿದರು.
ಈ ಹಿಂದೆ ಇದೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದಲ್ಲಿ ತಮ್ಮ ಹೆಸರಿನಲ್ಲಿ 70 ಸಾವಿರ ಮಗನ ಮತ್ತು ಮೊಮ್ಮಕ್ಕಳ ಹೆಸರಿನಲ್ಲಿ ಸೇರಿ ಒಟ್ಟು 3 ಲಕ್ಷ 60 ಸಾವಿರ ರೂಪಾಯಿ ಹಣವನ್ನು ಠೇವಣಿ ಮಾಡಿದ್ದ ವೃದ್ಧೆ ಸರ್ವಮಂಗಲಾ ಮಹಾದೇವ ಬರಗಿ ತನ್ನ ಚಿಕಿತ್ಸೆಗಾಗಿ ಠೇವಣಿ ಹಣ ಸೀಗದೇ ಮೃತಪಟ್ಟಿದ್ದು, ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದ ಎದುರು ಮೃತ ವೃದ್ಧೆಯ ಮೊಮ್ಮಕ್ಕಳು ಅಜ್ಜಿಯ ಭಾವಚಿತ್ರವನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಹಕರು ಸಹಕಾರಿ ಸಂಘದ ಹಾಗೂ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘ 1994ರಲ್ಲಿ ಪ್ರಾರಂಭಗೊಂಡಿದ್ದು ಸುಮಾರು 10 ವರ್ಷಗಳ ಕಾಲ ಸರಳವಾಗಿ ಆಡಳಿತ ನಡೆಸುತ್ತ ಬಂದಿದೆ. ಆದರೆ ಇತ್ತಿಚೇಗೆ ಈ ಸಹಕಾರಿ ಸಂಘದಲ್ಲಿ ಠೇವಣಿ ಇಟ್ಟಿದ್ದ 300 ಕ್ಕೂ ಹೆಚ್ಚು ಬಡಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 4 ಕೋಟಿಗಿಂತಲು ಹೆಚ್ಚು ಹಣವನ್ನು ಠೇವಣಿ ಇಟ್ಟಿರುವುದಾಗಿ ಬೆಳಕಿಗೆ ಬಂದಿದೆ.
ಸುಮಾರು ಒಂದು ವರ್ಷದಿಂದ ಠೇವಣಿ ಮಾಡಿರುವ ಗ್ರಾಹಕರ ಹಣವನ್ನು ಮರಳಿ ನೀಡದೆ ಸಹಕಾರಿ ಸಂಘದ ಕಾರ್ಯಾಲಯವನ್ನು ಬಂದ ಮಾಡಿದ್ದು ಒಂದು ವರ್ಷದಿಂದ ಗ್ರಾಹಕರು ಸಹಕಾರಿ ಸಂಘದ ಕಾರ್ಯಾಲಯಕ್ಕೆ ಅಲೆದು ಬೇಸತ್ತು ಹೋಗಿದ್ದಾರೆ.
ಈ ಸಹಕಾರಿ ಸಂಘದಲ್ಲಿ ಠೇವಣಿ ಮಾಡಿದ್ದ ಓರ್ವ ವೃದ್ಧೆ ಸಾವನ್ನಪ್ಪಿದ್ದು, ಇನ್ನೊಬ್ಬ ವೃದ್ಧ ಚಿಕಿತ್ಸೆಗೆ ಹಣ ಸಿಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದ ಆಡಳಿತ ಮಂಡಳಿ ಮಾತ್ರ ಇತ್ತ ಸುಳಿಯುತ್ತಿಲ್ಲ. ಠೇವಣಿ ಇಟ್ಟಿರುವ ಸ್ಥಳೀಯ ಹಾಗೂ ಪರಸ್ಥಳದ ಸಾರ್ವಜನಿಕರು ಸುಮಾರು ಒಂದು ವರ್ಷದಿಂದ ಹೋರಾಟ ನಡೆಸುತ್ತ ಬಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ