Latest

ಗೋವಾ ಕಡಲತಟದಲ್ಲಿ ಗಾಳಿಪಟ ಉತ್ಸವ: ಬೆಳಗಾವಿ ಶಾಸಕ ಅಭಯ್ ಪಾಟೀಲ ಆಯೋಜನೆ

      

  ಪ್ರಗತಿವಾಹಿನಿ ಸುದ್ದಿ, ಗೋವಾ

ಗೋವಾದ ರಿವಾ ಬೀಚ್   ಕಡಲತಡಿ ಎಂದಿನಂತಿರಲಿಲ್ಲ. ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ, ಚಿಣ್ಣರ ಕೇಕೆ, ಯುವಕ–ಯುವತಿಯರ ಶಿಳ್ಳೆ, ಚಪ್ಪಾಳೆ ಸುರಿಮಳೆ.. ಈ ದೃಶ್ಯಾವಳಿ ಕಂಡುಬಂದಿದ್ದು, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆಯೋಜಿಸಿರುವ ಗೋವಾ 6ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ.

ಅಭಯ ಪಾಟೀಲ ಪ್ರತಿವರ್ಷದಂತೆ ಈ ವರ್ಷವೂ ಗೋವಾದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ್ದಾರೆ. ಲೋಹದ ಹಕ್ಕಿಗೆ ಸವಾಲು ಹಾಕಿದಂತೆ ಆಗಸಕ್ಕೆ ಚಿಮ್ಮಿದ ವಿವಿಧ ಚಿತ್ತಾರದ ಗಾಳಿಪಟಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಫೈಟರ್ ಕೈಟ್ , ರಾಷ್ಟ್ರಧ್ವಜ, ಟ್ರೈನ್ ಕೈಟ್, ಆಕ್ಟೋಪಸ್, ಹನುಮಾನ ಕೈಟ್ ಸೇರಿದಂತೆ ವಿವಿಧ ರೂಪಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದವು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣ, ಬಣ್ಣದ ಗಾಳಿಪಟ ಹಾರಿಸಿ ಸಂತಸಪಟ್ಟರು.

       ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ಗೋವಾ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ದಯಾನಂದ ಸೋಪ್ಟೆ ಮಾತನಾಡಿ, ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಗೋವಾದಲ್ಲಿ ಕಳೆದ ಆರು ವರ್ಷಗಳಿಂದ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವವನ್ನು ಹಮ್ಮಿಕೊಳ್ಳುತ್ತ ಬಂದಿರುವುದು ಶ್ಲಾಘನೀಯ. ದೇಶ, ವಿದೇಶಿ ಗಾಳಿಪಟ ಹಾರಿಸುವ ಅವಕಾಶ ದೊರೆತಿದೆ. ದೇಶ, ವಿದೇಶಗಳ ಸಾಂಸ್ಕೃತಿಕ ಪ್ರತಿಬಿಂಬ ಅನಾವರಣಗೊಳಿಸಿದೆ ಎಂದು ಹೇಳಿದರು. 

       ಕರ್ನಾಟಕ  ಕೆರಳ, ಮಹಾರಾಷ್ಟ್ರ, ಗುಜರಾತ್, ಸೇರಿದಂತೆ ಅಂತಾರಾಷ್ಟ್ರೀಯ ಗಾಳಿ ಪಟ ಪಟುಗಳು ತಮ್ಮ ದೇಶ ಪ್ರತಿಬಿಂಬಿಸುವ ವಿವಿಧ ಆಕಾರ ಮತ್ತು ವರ್ಣರಂಜಿತ ಗಾಳಿ ಪುಟಗಳನ್ನು ಹಾರಿಸಿದರು.

  ಈ ಸಂದರ್ಭದಲ್ಲಿ ಪರಿವರ್ತನ ಪರಿಹಾರದ ಸತೀಶ್ ಕುಲಕರ್ಣಿ, ಅಶೋಕ ನಾಯಕ , ದೀಪಕ ಗೋಜಗೇಕರ, ಪ್ರದೀಪ್ ಶೆಟ್ಟಿ, ಸಂದೇಶ ಸಾವಂತ,  ಮನೀಷಾ ಕೋರ್ಗನಕರ,  ಪವನ ಮೂರ್ಜೆ,   ಅನಂತ ಗಡ್ಡೇಕರ, ಸೂರಜ ತಾಳಕರ ಮೊದಲಾದವರು ಉಪಸ್ಥಿತರಿದ್ದರು.

 

      

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button