ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ
ಚಾಮರಾಜನಗರ ಜಿಲ್ಲೆಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 18 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ದೇವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಈ ವೇಳೆ ಅನ್ನಕ್ಕೆ ವಿಷ ಸೇರಿಸಿರುವ ಶಂಕೆ ವ್ಯಕ್ತವಾಗಿದೆ. ಎರಡು ಗುಂಪಿನ ಮಧ್ಯೆ ಇದ್ದ ಜಗಳವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ವಿಷ ಬೆರೆಸಿದ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ.
15ಕ್ಕೂ ಹೆಚ್ಚು ಅಂಬುಲೆನ್ಸ್ ಗಳನ್ನು ಸ್ಥಳಕ್ಕೆ ರವಾನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸ್ಥಳಕ್ಕೆ ಧಾವಿಸಿದ್ದಾರೆ. ಆಸ್ಪತ್ರೆಗಳಲ್ಲಿ ಐಸಿಯು ಕೊರತೆ ಉಂಟಾಗಿದೆ. ಹಲವರನ್ನು ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.
ಸಿಎಂ ಪ್ರವಾಸ ರದ್ಧು: ಘಟನೆಯ ಹಿನ್ನೆಲೆಯಲ್ಲಿ ದಿಗ್ಭ್ರಮೆಗೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮೆಲ್ಲ ಕಾರ್ಯಕ್ರಮ ರದ್ಧುಪಡಿಸಿ ಚಾಮರಾಜನಗರಕ್ಕೆ ಧಾವಿಸುತ್ತಿದ್ದಾರೆ. ಬೆಳಗಾವಿಯಿಂದ ಚೆನ್ನೈಗೆ ತರಳಿದ್ದ ಕುಮಾರಸ್ವಾಮಿ, ಸಂಜೆ 6 ಗಂಟೆ ವೇಳೆಗೆ ಸುದ್ದಿ ತಿಳಿದ ತಕ್ಷಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆಮಾತನಾಡಿ ಎಲ್ಲ ಅಗತ್ಯ ಕ್ರಮಕ್ಕೆ ಆದೇಶಿಸಿದ್ದಾರೆ. ಜೊತೆಗೆ ತಮ್ಮ ಎಲ್ಲ ಕಾರ್ಯಕ್ರಮ ರದ್ಧುಪಡಿಸಿ ವಾಪಸ್ಸಾಗಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿರುವ ರಾಜ್ಯ ಸರಕಾರ, ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಘೋಷಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ