ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ : ಸರಕಾರ ರೂಪಿಸಿರುವ ರಾಷ್ಟ್ರೀಯ ಜಂತು ಹುಳು ನಿವಾರಣಾ ಯೋಜನೆಯು ಮಹತ್ವಾಂಕ್ಷಿ ಯೋಜನೆಯಾಗಿದ್ದು, ೧-೧೯ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಯನ್ನು ನೀಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣೆಗೆ ಹಾಗೂ ಕಲಿಕಾ ಸಾಮರ್ಥ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಗ್ರಾಮ ಪಂಚಾಯತ ಯಳ್ಳೂರ ಸಹಯೋಗದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಅಂಗವಾಗಿ ಯಳ್ಳೂರಿನ ಸರಕಾರಿ ಮಾದರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಸಾಂಕೇತಿಕವಾಗಿ ೫ ಮಕ್ಕಳಿಗೆ ಜಂತು ಮಾತ್ರೆಗಳನ್ನು ನುಂಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಪ್ಪಾಸಾಹೇಬ ನರಟ್ಟಿ, ಮಕ್ಕಳಿಗೆ ಮನೆಯೇ ಮೊದಲು ಪಾಠಶಾಲೆಯಾಗಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಮಹತ್ವದ್ದಾಗಿರುತ್ತದೆ. ಮಕ್ಕಳು ಶಾಲೆಗೆ ಸೇರಿದ ನಂತರ ಅಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮದಡಿ ಅಂಗನವಾಡಿ ಹಾಗೂ ಶಾಲೆಗಳಲ್ಲಿನ ೦-೧೯ ವರ್ಷದ ಮಕ್ಕಳ ತಪಾಸಣೆ ಮಾಡಿ ಪತ್ತೆ ಹಚ್ಚಿದ ನ್ಯೂನತೆಗಳಿಗೆ ಉಚಿತ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಿ ಮಕ್ಕಳ ಆರೋಗ್ಯ ಮಟ್ಟವನ್ನು ಹೆಚ್ಚಿಸಲಾಗುತ್ತದೆ. ರಾಷ್ಟೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಡಿ ಮಕ್ಕಳ ಕುಂಠಿತ ಬೆಳವಣಿಗೆಗೆ ಕಾರಣವಾಗುವ ಜಂತು ನಾಶಕ್ಕಾಗಿ ಮಕ್ಕಳಿಗೆ ಮಾತ್ರೆಗಳನ್ನು ನೀಡಲಾಗುತ್ತದೆ. ಇದಕ್ಕೆ ಶಿಕ್ಷಕರು ಮತ್ತು ಪಾಲಕರು ಸಹಕಾರ ನೀಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ತಾಲೂಕಾ ಪಂಚಾಯತ ಸದಸ್ಯ ರಾವಜಿ ಪಾಟೀಲ, ಯಳ್ಳೂರ ಗ್ರಾಪಂ ಅಧ್ಯಕ್ಷೆ ಅನುಸೂಯಾ ಪರೀಟ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಪುಂಡಲಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾಳಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಣ ನಿರಗಟ್ಟಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಮಿಲ್ಯಾನಟ್ಟಿ, ಬೆಳಗಾವಿ (ಗ್ರಾಮೀಣ) ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಎಸ್. ಹೀರೆಮಠ, ಬೆಳಗಾವಿ (ಗ್ರಾಮೀಣ) ಶಿಶು ಅಭವೃದ್ಧಿ ಯೋಜನಾಧಿಕಾರಿ ರೇವತಿ ಹೊಸಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ, ಎಸ್ಡಿಎಂಸಿ ಅಧ್ಯಕ್ಷ ಡಿ.ಸಿ. ಬಾಗೇವಾಡಿ, ಮರಾಠಿ ಶಾಲೆ ಮುಖ್ಯೋಪಾಧ್ಯಾಯ ಎಸ್.ಎ. ಕೇಸರಕರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ