5049 ತಂಡಗಳನ್ನು ಹಿಂದಿಕ್ಕಿದ ಜಿ ಐ ಟಿ ತಂಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿಐಟಿ)ದ ನಾಲ್ಕು ವಿದ್ಯಾರ್ಥಿಗಳು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಮಾಡಲು 20 ಲಕ್ಷ ರೂ. “ಸೀಡ್ ಮನಿ” ಸಹಾಯ ಧನವಾಗಿ ಪಡೆದುಕೊಂಡಿದ್ದಾರೆ.
ಶರ್ಮದ ತಡ್ಕೋಡ್ಕರ್, ಯಶ್ ತೆಂಡೂಲ್ಕರ್, ಕಾರ್ತಿಕ್ ಕುಲಕರ್ಣಿ ಹಾಗೂ ಅಭಿಷೇಕ ಶ್ರೇಯಕರ ಸಾಧನೆ ಮಾಡಿದ ವಿದ್ಯಾರ್ಥಿಗಳು.
ಅವರ ತಂಡವು ವಿನ್ಯಾಸಗೊಳಿಸಿದ ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ರಕ್ಷಣಾ ಸಹಾಯಕ “ಫೈರ್ ಫೈಟ್ ಅಸಿಸ್ಟ್” ಸಾಧನಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್ ಟಿ ) ಹಾಗೂ ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂಬಿ) ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆ “ಟೆಕ್ಸಾಸ್ ಇನ್ ಸ್ಟ್ರುಮೆಂಟ್ ” ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಿನ್ಯಾಸ ಸ್ಪರ್ಧೆ “ಭಾರತದ ಇನ್ನೋವೇಶನ್ ಚಾಲೆಂಜ್ ಕಾಂಟೆಸ್ಟ್ -೧೭ (ಐಐಸಿಡಿಸಿ -೧೭ )” ರಲ್ಲಿ ಬಹುಮಾನ ಲಭಿಸಿದೆ.
ಜಿಐಟಿ ವಿದ್ಯಾರ್ಥಿಗಳ ತಂಡವು ಮೊದಲ 10 ತಂಡಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ರಾಷ್ಟ್ರದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಾದ ಐಐಟಿ ಮತ್ತು ಏನ್ಐಟಿ ಹಾಗೂ ಹೆಸರಾಂತ ತಾಂತ್ರಿಕ ವಿಶ್ವವಿದ್ಯಾಲಯಗಳೊಂದಿಗೆ ಸುಮಾರು 965 ತಾಂತ್ರಿಕ ಸಂಸ್ಥೆಯಿಂದ 5000 ಕ್ಕಿಂತಲೂ ಹೆಚ್ಚು ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಜಿಐಟಿ ವಿದ್ಯಾರ್ಥಿಗಳ ತಂಡ ಈ ಎಲ್ಲ ತಂಡಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದು ಜಿಐಟಿ ಯ ಶ್ರೇಷ್ಟತೆಗೆ ಹಾಗೂ ನಾವಿನ್ಯತೆ ಮತ್ತು ವಿದ್ಯಾರ್ಥಿಗಳ ಸಂಶೋಧನಾ ಮನೋಭಾವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಾಚಾರ್ಯ ಎ.ಎಸ್.ದೇಶಪಾಂಡೆ ಹೇಳಿದ್ದಾರೆ.
“ಫೈರ್ ಫೈಟ್ ಅಸಿಸ್ಟ್” ಎಂಬುದು ಒಂದು ವಿದ್ಯುನ್ಮಾನ ತಂತ್ರಜ್ಞಾನವನ್ನು ಒಳಗೊಂಡ ಅಗ್ನಿಶಾಮಕ ಸಾಧನವಾಗಿದೆ. ಈ ತಂಡವು ಇದರ ಕಾರ್ಯನಿರತ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲ ಉದ್ದೇಶ ಅಗ್ನಿ ಅವಘಡ ಸಂಭವಿಸಿದ ಪ್ರದೇಶದಲ್ಲಿ ಅಥವಾ ಬೆಂಕಿಯಿಂದ ಪೀಡಿತವಾದ ಪ್ರದೇಶದಲ್ಲಿ ಮನುಷ್ಯರನ್ನು ಪತ್ತೆಹಚ್ಚಿ ಅವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯವರಿಗೆ ಸಹಾಯ ಮಾಡುವುದರ ಜೊತೆಗೆ ಸಿಬ್ಬಂದಿ ಸಾಗಿದ ದಾರಿಯ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿರುವದರಿಂದ ಅಗ್ನಿ ಅವಘಡದ ಪ್ರದೇಶದಿಂದ ಯಾವುದೇ ಅಪಾಯವಿಲ್ಲದೆ ಹೊರಬರಲು ಸಹಾಯ ಮಾಡುತ್ತದೆ. ಪತ್ತೆಮಾಡುವಿಕೆಯ ವ್ಯಾಪ್ತಿಯು ಸುಮಾರು 20 -25 ಮೀಟರ್ ಇರುತ್ತದೆ.
ಐಐಎಂ ಬೆಂಗಳೂರಿನ ಇನ್ಕ್ಯುಬೇಷನ್ ಕೇಂದ್ರವಾದ ಎನ್ಎಸ್ಆರ್ ಸಿಎಲ್ ನಲ್ಲಿ “ಸಲ್ಯೂಸ್” ಎಂಬ ಉದ್ಯಮವನ್ನು ಈಗಾಗಲೇ ಜಿಐಟಿ ವಿದ್ಯಾರ್ಥಿಗಳು ಪ್ರಾರಂಭಿಸುವ ಮೂಲಕ ಈ ವಿದ್ಯಾರ್ಥಿಗಳು ಯುವ ಉದ್ಯಮಿಗಳಾಗಿದ್ದಾರೆ ಮತ್ತು ಇದರ ಜೊತೆಗೆ ಈ ಸಾಧನದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಮೂರು ಪೇಟೆಂಟ್ ಗಳನ್ನು ಈಗಾಗಲೇ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೊದಲು ತಂಡ ಬಹಳ ಕಠಿಣವಾದ ಪ್ರಕ್ರಿಯೆ ಮುಖಾಂತರ ಆಯ್ಕೆಯಾಗಿದೆ. ಐಐಸಿಡಿಸಿ 2017 ಸ್ಪರ್ಧೆಯ ಮೊದಲ ಹಂತದಲ್ಲಿ 965 ತಾಂತ್ರಿಕ ಇಲಾಖೆಗಳಿಂದ 5049 ಕ್ಕೂ ಹೆಚ್ಚು ನವೀನ ಪರಿಕಲ್ಪನೆಗಳು ಬಂದಿದ್ದವು. ಮೌಲ್ಯಮಾಪನದ ನಂತರ ಕೇವಲ 510 ತಂಡಗಳು ಎರಡನೇ ಸುತ್ತಿಗೆ ಆಯ್ಕೆಯಾದವು. ಅಲ್ಲಿ ಅವರ ನವೀನ ಪರಿಕಲ್ಪನೆಗಳನ್ನು ಮೂಲ ಮಾದರಿಯನ್ನು ಕಾರ್ಯನಿರತ ಮಾದರಿಯನ್ನಾಗಿ ಪರಿವರ್ತಿಸುವ ಅವಕಾಶವನ್ನು ನೀಡಲಾಯಿತು ಮತ್ತು ಮಾದರಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ವೀಡಿಯೊವನ್ನು ಸಲ್ಲಿಸಬೇಕಾಗಿತ್ತು. ಮೂರನೇ ಹಂತದಲ್ಲಿ,ತಮ್ಮ ಸಾಧನದ ವ್ಯಾಪಾರ ಯೋಜನೆಗಳನ್ನು ಪ್ರಸ್ತುತಪಡಿಸಲು ಹಾಗೂ ತಂಡದ ಸಂವಹನ ಮತ್ತು ವ್ಯಾಪಾರೋದ್ಯಮ ಯೋಜನೆಗಳನ್ನು ನಿರ್ಧರಿಸುವ ಮತ್ತು ತಂಡಗಳು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಅರ್ಥಮಾಡಿಕೊಂಡ ಮತ್ತು ಅದಕ್ಕೆ ತಕ್ಕಂತೆ ಸಾಧನವನ್ನು ತಯಾರಿಸುವ ಅಂಶಗಳ ಮೇಲೆ ಕೊನೆಯ ಸುತ್ತಿಗೆ ಕೇವಲ ೩೦ ತಂಡಗಳನ್ನು ಆಯ್ಕೆ ಮಾಡಲಾಯಿತು.
ಈ ಆಯ್ಕೆ ಪ್ರಕ್ರಿಯೆಯು ಔದ್ಯೋಗಿಕ ವಲಯದಿಂದ 50 ಕ್ಕಿಂತಲೂ ಹೆಚ್ಚು ತಜ್ಞರ ಜೊತೆಗೆ ಟೆಕ್ಸಾಸ್ ಇನ್ಸ್ಟ್ರುಮೆಂಟೇಷನ್ ದಿಂದ ನುರಿತ ತಾಂತ್ರಿಕ ತಜ್ಞರಿಂದ ನಾಲ್ಕು ಸುತ್ತುಗಳಲ್ಲಿ ನಡೆಯಿತು. ಹಲವು ಸುತ್ತಿನ ಚರ್ಚೆಗಳ ನಂತರ ಅಂತಿಮ 10 ವಿಜೇತರನ್ನು ಆರಿಸಲಾಯಿತು. ಈ ಹತ್ತು ತಂಡಗಳು ಈಗಾಗಲೇ ಐಐಎಂ ಬೆಂಗಳೂರಿನ ಇನ್ಕ್ಯುಬೇಷನ್ ಕೇಂದ್ರ – ಎನ್ ಎಸ್ ರಾಘವಾನ್ ಸೆಂಟರ್ ಫಾರ್ ಎಂಟರ್ಪ್ರೆನ್ಯುರಿಯಲ್ ಲರ್ನಿಂಗ್ (ಎನ್ಎಸ್ಆರ್ಸಿಎಲ್) ದಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿವೆ. ಆ ಶ್ರೇಷ್ಠ್ ಹತ್ತರಲ್ಲಿ ಜಿಐಟಿ ತಂಡವು ಪ್ರಥಮ ಸ್ಥಾನದಲ್ಲಿದೆ.
ಈ ವಿದ್ಯಾರ್ಥಿಗಳಿಗೆ ಜಿಐಟಿ ಸಿಬ್ಬಂದಿಗಳಾದ ಪ್ರೊ. ಉತ್ತಮ ದೇಶಪಾಂಡೆ, ಪ್ರೊ ಪ್ರವೀಣ್ ಕಾಲಕುಂದ್ರಿ, ಪ್ರೊ. ಸಂತೋಷ್ ಸರಾಫ್, ಪ್ರೊ ವೀಣಾ ದೇಸಾಯಿ, ಗೌರವ್ ಕಾಮತ್ ಇವರ ಮಾರ್ಗದರ್ಶನವಿತ್ತು .
ಕೆಎಲ್ಎಸ್ ಸಂಸ್ಥೆಯ ಕಾರ್ಯಧ್ಯಕ್ಷ ಎಂ ಆರ್ ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ್, ಪ್ರಾಚಾರ್ಯ ಡಾ. ಎ. ಎಸ್. ದೇಶಪಾಂಡೆ, ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ