ಐದು ದಿನಗಳ “ಗಾಂಧಿಯಾನ ” ಕ್ಕೆ ಹುದಲಿಯಲ್ಲಿ ತೆರೆ
ಪ್ರಗತಿವಾಹಿನಿ ಸುದ್ದಿ, ಹುದಲಿ (ಬೆಳಗಾವಿ)
ಸತೀಶ ಜಾರಕಿಹೊಳಿ ಅವರನ್ನು ನಾನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ, ಅವರು ಸಾಗುತ್ತಿರುವ ದಾರಿ ಲಕ್ಷಾಂತರ ಯುವಜನತೆಗೆ ಸ್ಪೂರ್ತಿ ನೀಡುತ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಬಣ್ಣಿಸಿದರು.
ಮಹಾತ್ಮಾ ಗಾಂಧಿಜೀ 150 ನೇ ಜನ್ಮವರ್ಷಾರಣೆ ನಿಮಿತ್ತ ಹುದಲಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನ ಮೂಢನಂಬಿಕೆಯಿಂದ ಹೊರ ಬರಬೇಕು ಎನ್ನುವ ನಿಟ್ಟಿನಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರಾತ್ರಿ ಪೂರ್ತಿ ಸತೀಶ ಜಾರಕಿಹೊಳಿ ಸ್ಮಶಾನದಲ್ಲಿ ಕಾಲ ಕಳೆಯುತ್ತಾರೆ. ಈ ಕಾರ್ಯಕ್ರಮ ದೇಶ್ಯಾದ್ಯಂತ ಹಲವರಿಗೆ ಪ್ರೇರಣೆಯಾಗಿದೆ ಎಂದರು.
ಜನರು ಮೊದಲು ತಪ್ಪು ಕಲ್ಪನೆಗಳಿಂದ ಹೊರಬರಬೇಕು. ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುವ ಸತೀಶ ಜಾರಕಿಹೊಳಿ ಅವರು ಇಂದು ಮಂತ್ರಿಯಾಗಿದ್ದಾರೆ. ಸ್ಮಶಾನದ ವಿಷಯದಲ್ಲಿ ಹೆದರುವ ಜನತೆಗೆ ಇದೊಂದು ಉತ್ತಮ ಉದಾಹರಣೆ, ಮೂಢನಂಬಿಕೆಯಿಂದ ಹೊರ ಬಂದು ಜಾಗೃತರಾಗಬೇಕು. ಜೀವನದಲ್ಲಿ ಬರುವ ಸಮಸ್ಯೆಗಳಿಗೂ ಜಾತಕಕ್ಕೂ ಸಂಬಂಧವಿಲ್ಲ. ನಾವು ಮಾಡುವ ಪಯತ್ನ ನಮ್ಮನ್ನು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ದಿನೇಶ ಗುಂಡೂರಾವ್ ಹೇಳಿದರು.
ಗಾಂಧೀಜಿ ಪಾದಸ್ಪರ್ಷದ ಪ್ರಭಾವ ಇನ್ನೂ ಇದೆ
ಕೇಸರೀಕರಣದ ಭಯ ಕಾಡುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಜಿ ತತ್ವ ಮತ್ತು ಆದರ್ಶಗಳನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಡುವ ಅಗತ್ಯ ಹೆಚ್ಚಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಪ್ರತಿಪಾದಿಸಿದರು.
ಮಹಾತ್ಮಾ ಗಾಂಧಿಯವರ 150 ನೇ ವರ್ಷಾಚರಣೆ ಅಂಗವಾಗಿ ರಾಜೀವ ಗಾಂಧಿ ಪಂಚಾಯತ ಸಂಘಟನೆಯು ಮೀನಾಕ್ಷಿ ನಟರಾಜ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗದಗದಿಂದ ಹುದಲಿವರೆಗಿನ ” ಗಾಂಧಿಯಾನ ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.
ಗಾಂಧೀಜಿಯವರ ವಿಚಾರಗಳು, ಅಹಿಂಸಾ ಮಾರ್ಗದ ಹೋರಾಟದ ಮಾರ್ಗ , ಅವರ ನಡೆ-ನುಡಿಗಳ ಬಗ್ಗೆ ಗಾಂಧಿಯಾನದ ಮೂಲಕ ಯುವಜನರು ಮತ್ತು ಸಮಾಜಕ್ಕೆ ತಿಳಿಸಿಕೊಡುವ ಯತ್ನ ನಡೆದಿರುವುದು ಶ್ಲಾಘನೀಯ. ಇದು, ಗದಗ ಅಥವಾ ಹುದಲಿಗಳಿಗಷ್ಟೇ ಸೀಮಿತವಾಗದೇ ದೇಶದ ಎಲ್ಲ ಹಳ್ಳಿ, ಪಟ್ಟಣಗಳಲ್ಲಿಯೂ ಇಂತಹ ಯಾನದ ಮೂಲಕ ಗಾಂಧಿ ತತ್ವಗಳ ಪ್ರಸರಣ ಆಗಬೇಕು ಎಂದರು.
ಗಾಂಧಿ ಆದರ್ಶಗಳ ಜತೆಗೆ ಬುದ್ದ-ಬಸವ-ಅಂಬೇಡ್ಕರ್ ಮೊದಲಾದ ಮಹನೀಯರನ್ನು ಅರಿತುಕೊಳ್ಳುವ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಅತ್ಯಂತ ಪ್ರಭಾವಶಾಲಿಯಾಗಿರುವ ಗಾಂಧೀಜಿ ಆದರ್ಶಗಳು ಪುಸ್ತಕಗಳಿಗೆ ಮಾತ್ರ ಸೀಮಿತವಾಗುವುದು ಬೇಡ. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಇಂತಹ ಅಭಿಯಾನಗಳು ಖಂಡಿತವಾಗಿಯೂ ಸಹಕಾರಿಯಾಗುತ್ತವೆ. ಅವುಗಳನ್ನು ರಾಜೀವಾಗಾಂಧಿ ಪಂಚಾಯತ ಸಂಘಟನೆ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಕೊಡಲು ತಾವು ಸಿದ್ದ ಎಂದು ಸಚಿವರು ಘೋಷಿಸಿದರು.
ಸುಮಾರು 80 ವರ್ಷಗಳ ಹಿಂದೆ ಗಾಂಧೀಜಿ ಭೇಟಿ ನೀಡಿದ್ದ ಹುದಲಿ ಗ್ರಾಮದಲ್ಲಿ ಅವರ ಪಾದಸ್ಪರ್ಷದ ಪ್ರಭಾವ ಇನ್ನೂ ಇದೆ. ಅದೇ ಕಾರಣಕ್ಕಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಮತಕ್ಷೇತ್ರಕ್ಕೆ ಭೇಟಿಯನ್ನೇ ನೀಡದೆ, ನೇರವಾಗಿ ಮತಯಾಚನೆ ಮಾಡದೇ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವುದಾಗಿ ಹೇಳಿದರು. ಇದು ಗಾಂಧೀಜಿ ಪಾದಸ್ಪರ್ಷದ ಪ್ರಭಾವ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಎಂದೂ ಅವರು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ವಿ. ನಾರಾಯಣ, ಮಾಜಿ ಶಾಸಕ ಡಿ.ಆರ್ ಪಾಟೀಲ್, ಮಾಜಿ ಶಾಸಕ ವೀರಕುಮಾರ್ ಪಾಟೀಲ್, ಶಾಸಕರಾದ ವಿಜಯ ಸಿಂಗ್, ಮಹಾಂತೇಶ ಕೌಜಲಗಿ, ಕೃಷ್ಣ, ಶಿವರಾಜ, ಮಾಳಗಿ ಮತ್ತು ಮಳಗಲಿ, ಎಐಸಿಸಿ ಕಾರ್ಯದರ್ಶಿ ಸಂದೀಪ, ಆನಂದ ದೇವಪ್ಪ, ಬಾಜಿರಾವ್ ಖಡೆ, ಕೇರಳದ ಗೀತಾ ಕೃಷ್ಣನ, ಸುಶೀಲ ಕುಮಾರ್, ಲಕ್ಷ್ಮಣರಾವ್ ಚಿಂಗಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಇತರರು ಇದ್ದರು. ಉಮೇಶ ಬಾಳಿ ಸ್ವಾಗತ ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ