ಪ್ರಗತಿವಾಹಿನಿ ಸುದ್ದಿ, ಮೈಸೂರು
ಸಮಸ್ಯೆ ಹೇಳಿಕೊಳ್ಳಲು ಶಾಸಕರು ಕೈಗೆ ಸಿಗುವುದಿಲ್ಲ ಎಂದು ಹೇಳಿದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆಯ ಮೇಲೆ ಸಿಡಿಮಿಡಿಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಕೆಯ ಕೈಯಿಂದ ಮೈಕ್ ಕಸಿದರು. ಈ ವೇಳೆ ದುಪಟ್ಟಾವೂ ಅವರ ಕೈಗೆ ಬಂದಿದ್ದು, ಸಿದ್ದರಾಮಯ್ಯ ವರ್ತನೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.
ತಮ್ಮ ಪುತ್ರ ಯತೀಂದ್ರ ಕ್ಷೇತ್ರದ ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕುಸ್ಥಾಪನೆಗೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದವರು ಸಮಸ್ಯೆ ಹೇಳತೊಡಗಿದರು.
ನಮ್ಮ ಕ್ಷೇತ್ರದ ಎಂಎಲ್ಎ ಆದ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಕೈಗೆ ಸಿಗೋದಿಲ್ಲ. ಕೆಲಸ ಮಾಡಿಸೋದು ಹೇಗೆ? ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ಎನ್ನುವವರು ಟೇಬಲ್ ಕುಟ್ಟಿ ಪ್ರಶ್ನಿಸಿದರು. ತಮ್ಮ ಮಗನ ವಿರುದ್ಧ ಪ್ರಶ್ನೆ ಕೇಳಿದ್ದು ಮತ್ತು ಮೇಜು ಕುಟ್ಟಿದ್ದು ಸಿದ್ದರಾಮಯ್ಯ ಅವರನ್ನು ಕೆರಳಿಸಿತು.
ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಮಹಿಳೆಯ ಕೈಯಿಂದ ಮೈಕ್ ಕಿತ್ತುಕೊಂಡರು. ಆ ವೇಳೆ ಆಕೆಯ ದುಪಟ್ಟಾ ಕೂಡ ಸಿದ್ದರಾಮಯ್ಯ ಕೈಗೆ ಬಂತು. ಈ ವೇಳೆ ಮಹಿಳೆ ವಿರುದ್ಧ ಸಿದ್ದರಾಮಯ್ಯ ತೀವ್ರ ಕಿಡಿಕಾರಿ, ಮಾತನಾಡಲು ಅವಕಾಶ ಕೊಡದೆ ಬಲವಂತವಾಗಿ ಕೂಡ್ರಿಸಿದರು.
ಘಟನೆ ಕುರಿತು ಎಲ್ಲೆಡೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಬಿಜೆಪಿ ಸಿದ್ದರಾಮಯ್ಯ ಅವರನ್ನು ಆಧುನಿಕ ದುಶ್ಯಾಸನ ಎಂದು ಟ್ವೀಟ್ ಮಾಡಿದೆ. ಬಿಜೆಪಿಯ ಹಲವು ಮುಖಂಡರು ಸಿದ್ದರಾಮಯ್ಯ ವರ್ತನೆಗೆ ಟೀಕಿಸಿದರೆ ಕಾಂಗ್ರೆಸ್ ಸಮರ್ಥಿಸಿಕೊಳ್ಳಲು ಯತ್ನಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ