Latest

ನಿಷ್ಕಾಮ, ಸ್ವಚ್ಛ ಮನಸ್ಸಿನ ದೇವರ ಸ್ಮರಣೆ ನಿಜವಾದ ಭಕ್ತಿ 

ಕೊಪ್ಪಳದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ

ಪ್ರಗತಿವಾಹಿನಿ ಸುದ್ದಿ, ಬೆಲ್ಲದಬಾಗೇವಾಡಿ (ಹುಕ್ಕೇರಿ):
‘ಸ್ವಚ್ಛ, ನಿಷ್ಕಾಮ ಮನಸ್ಸಿನಿಂದ ದೇವರನ್ನು ಸ್ಮರಿಸುವುದು ನಿಜವಾದ ಭಕ್ತಿ’ ಎಂದು ಕೊಪ್ಪಳದ ಗವಿಸಿದ್ಧೇಶ್ವರಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೆಲ್ಲದ-ಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಲಿಂಗೈಕ್ಯ ಮಹಾಂತ ಶಿವಯೋಗಿಗಳವರ 40ನೇ ಪುಣ್ಯಸ್ಮರಣೆ ಹಾಗೂ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮದ ಎಂಟನೇ ದಿನದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಭಕ್ತಿಯಲ್ಲಿ ನಿಸ್ವಾರ್ಥತೆ ಇರಬೇಕು ಎಂದರು.
ದೇವರಿಗೆ ಅಭಿಷೇಕ, ನೈವೇದ್ಯ, ಕಾಯಿ ಒಡೆಯುವುದರಲ್ಲಿ ಭಕ್ತಿ ಇರುವುದಿಲ್ಲ. ನಮ್ಮ ಸ್ವಚ್ಛ ಮನಸ್ಸಿನ ಭಾವನೆಗಳಲ್ಲಿ ನಿಜವಾದ ಭಕ್ತಿ ಅಡಕವಾಗಿರುತ್ತದೆ, ಅದು ಅಂತರಂಗದ ಭಕ್ತಿಯಾಗಿರಬೇಕು ಎಂದರು.
ಮನಸ್ಸಿನೊಳಗಿನ ನಿಷ್ಕಾಮ ಭಕ್ತಿ ತುಂಬಿ ಅದು ಬುದ್ದಿಯಲ್ಲಿ ಹರಿದರೆ ಜ್ಞಾನಯೋಗವಾಗಿ, ಕ್ರಿಯೆಯಲ್ಲಿ ಹರಿದರೆ ಅದು ಕರ್ಮಯೋಗವಾಗಿ, ಭಾವನೆಗಳಲ್ಲಿ ಹರಿದರೆ ಅದು ಭಕ್ತಿಯೋಗವಾಗುತ್ತದೆ ಎಂದರು.
ಸಮಾಜಕ್ಕೆ ಬೆಳಕು ನೀಡುವ ಸಂತ, ಸ್ವಾಮೀಜಿಗಳ ಹುಟ್ಟುಹಬ್ಬವು ಸಮಾಜಕ್ಕೆ ಅರ್ಪಣೆಯಾಗಿರುತ್ತದೆ. ವಿರಕ್ತಮಠದ ಶಿವಾನಂದ ಸ್ವಾಮೀಜಿಯವರು ಸಮಾಜದೊಂದಿಗೆ ಬೆಳೆದು ಬೆಳಕಾಗಿದ್ದಾರೆ ಎಂದರು.
ಕುಂದರಗಿಯ ಅಡವಿಸಿದ್ಧೇಶ್ವರಮಠದ ಅಮರಸಿದ್ಧೇಶ್ವರ ಸ್ವಾಮೀಜಿಯವರು ‘ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ ವಚನ ಚಿಂತನ ಮಾಡಿದರು.
ಮದುರಖಂಡಿಯ ಡಾ. ಈಶ್ವರ ಮಂಟೂರ ‘ಶರಣರ ಜೀವನ ದರ್ಶನ’ ಪ್ರವಚನ ಮಾಡಿದರು.
ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಚಿಮ್ಮಡದ ಪ್ರಭು ಸ್ವಾಮೀಜಿಗಳು ಮಾತನಾಡಿದರು.
ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಭಕ್ತರು ನೀಡಿದ ತುಲಾಭಾರ, ಗೌರವ ಸನ್ಮಾನಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.
ಮೂಡಲಗಿಯ ಬಾಲಶೇಖರ ಬಂದಿ, ದಯಾನಂದ ಬೆಲ್ಲದ, ಆರ್.ಟಿ. ಶಿರಗಾಂವ, ಪ್ರಕಾಶ ಪಾಟೀಲ, ಶೇಖರ ಬುರ್ಜಿ ಅವರನ್ನು ಸನ್ಮಾನಿಸಿದರು. ಜೀವನ ಪಾಟೀಲ, ಎ.ಎ. ಕೋಳಿ ನಿರೂಪಿಸಿದರು.
ಮೆಹಬೂಬ್ ನದಾಫ್ ಅವರ ಗಾಯನ ಕಾರ್ಯಕ್ರಮ ನಡೆಯಿತು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button