ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ೨೭೧೬ ಉಪನ್ಯಾಸಕರ ಹುದ್ದೆಗಳ ಪೈಕಿ ೧೨೦೪ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಉಳಿದ ೧೫೧೨ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ರಾಜ್ಯ ವಿಧಾನಸಭೆಗೆ ಭರವಸೆ ನೀಡಿದರು.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಹರತಾಳು ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಖಾಲಿ ಇರುವ ವಿವಿಧ ವಿಷಯಗಳ ೧೨೦೪ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಚಾಲನೆ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಗತ್ಯವಿರುವ ಉಪನ್ಯಾಸಕರ ನೇಮಕಾತಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಲ್ಲದೆ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ೨೯೯೭ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು.
ಹತ್ತು ವರ್ಷಕ್ಕೂ ಮೇಲ್ಪಟ್ಟು ‘ಎ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಪೈಕಿ ಶೇಕಡಾ ಐದರಷ್ಟು ಉಪನ್ಯಾಸಕರನ್ನು ಗ್ರಾಮೀಣ ವಲಯದ ಕಾಲೇಜುಗಳಿಗೆ ವರ್ಗಾಯಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಒತ್ತಡವಿರುವ ಕಾಲೇಜುಗಳಿಗೆ ನಿಯೋಜಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ