ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಡಾ. ಬಾಬಾಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಪ್ರಯುಕ್ತ ಸತತ ಐದನೇ ವರ್ಷ ಮಾನವ ಬಂಧುತ್ವ ವೇದಿಕೆ ಡಿ. 6 ರಂದು ಹಮ್ಮಿಕೊಂಡಿರುವ ಪರಿವರ್ತನಾ ದಿನಾಚರಣೆ ಜಾಗೃತಿಗಾಗಿ ಮಂಗಳವಾರ ಜಾಥಾ ನಡೆಯಿತು.
ಸದಾಶಿವ ನಗರದ ಬುದ್ಧ ಬಸವ ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ) ದಿಂದ ಆರಂಭವಾದ ಜಾಥಾಕ್ಕೆ ಬಂಡಾಯ ಸಾಹಿತಿ ವೈ.ಬಿ. ಹಿಮ್ಮಡಿ, ಕೆಪಿಸಿಸಿ ಬೆಳಗಾವಿ ಜಿಲ್ಲಾ ಎಸ್. ಟಿ. ಘಟಕದ ಅಧ್ಯಕ್ಷ ಬಾಳೇಶ ದಾಸನಟ್ಟಿ, ಸಮತಾ ಸೈನಿಕ ಶಾಲೆ ಅಧ್ಯಕ್ಷ ಶಂಕರ ಬಾಗೇವಾಡಿ ಹಾಗೂ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ವಿಭಾಗೀಯ ಸಂಚಾಲಕ ಮಹಾಲಿಂಗಪ್ಪಾ ಅಲಬಾಳ, ವಾಲ್ಮೀಕಿ ಯುವ ವೇದಿಕೆ-ಕರ್ನಾಟಕ ಅಧ್ಯಕ್ಷ ವಿಜಯ ತಳವಾರ ಚಾಲನೆ ನೀಡಿದರು.
ಬೈಕ್ ಜಾಥಾ ಚಾಲನೆಗೂ ಮುನ್ನ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಮಾತನಾಡಿ, ಶಾಂತಿಯುತವಾಗಿ ಜಾಥಾ ನಡೆಸುವಂತೆ ಸಲಹೆ ನೀಡಿದರು. ಜಾಥಾದುದ್ದಕ್ಕೂ ಕಾನೂನು ಉಲ್ಲಂಘನೆಯಾಗಲಿ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದಾಗಲಿ ಮಾಡಬಾರದು ಎಂದೂ ವಿನಂತಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾದಲ್ಲಿ 200-250 ಬೈಕ್ ಗಳ್ ಮೇಲೆ 350 ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು. ಡಿ.6 ರಂದು ಪರಿವರ್ತನಾ ದಿನಾಚರಣೆಯಲ್ಲಿ ಭಾಗಿಯಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ