Latest

ಇನ್ನೂ 6 ತಿಂಗಳು ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ಡೌಟ್

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇದೇ ಮಾರ್ಚ್ 9ರಂದು ಬೆಳಗಾವಿ ಮಹಾನಗರ ಪಾಲಿಕೆಯ ಪ್ರಸ್ತುತ ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಸಧ್ಯದಲ್ಲೇ ಚುನಾವಣೆ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಕಾಣುತ್ತಿದೆ.

2013ರಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ನಂತರ ಮೇಯರ್ ಕೆಟೆಗರಿ ವಿವಾದದಿಂದಾಗಿ ಒಂದು ವರ್ಷದ ನಂತರ ಪಾಲಿಕೆ ಸದಸ್ಯರು ಅಧಿಕಾರ ಸ್ವೀಕರಿಸಿದ್ದರು. ಹಾಗಾಗಿ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಈಗಿನ ಸದಸ್ಯರು ಆಯ್ಕೆಯಾಗಿ  6 ವರ್ಷಗಳಾಗಿವೆ. 

ಮಾರ್ಚ್ 9ರಂದು ಅಧಿಕಾರಾವಧಿ ಮುಗಿಯುವುದರಿಂದ ಜನೆವರಿ ಅಂತ್ಯದೊಳಗೆ ಚುನಾವಣೆ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈವರೆಗೂ ಅಂತಹ ಯಾವುದೇ ಸುಳಿವಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ಗಳನ್ನು ಪುನರ್ ವಿಂಗಡಿಸಲಾಗಿದೆ. ಮತದಾರರ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿದ್ದ ಕಾರಣ ಅವುಗಳನ್ನು ಸರಿಪಡಿಸಿ ಪುನರ್ ವಿಂಗಡಿಸಲಾಗಿದೆ. ಅಲ್ಲದೆ, ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಿದ್ದ ವಾರ್ಡ್ ಕ್ರಮ ಸಂಖ್ಯೆ ಈಗ ಉತ್ತರ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗುತ್ತವೆ. 

ಈ ಬಾರಿ ಚುನಾವಣೆಗೆ ಮೀಸಲಾತಿ ಪಟ್ಟಿಯನ್ನು ಸುಮಾರು 4 ತಿಂಗಳ ಹಿಂದೆಯೇ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಲಾಗಿತ್ತು. ಮೀಸಲು ಪಟ್ಟಿ ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಜಾತಿಯ ಮತದಾರರು ಇಲ್ಲದೇ ಇದ್ದರೂ ಅಂತಲ್ಲಿ ಅವರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಯವರು ಹೆಚ್ಚಿದ್ದರೂ ಅಂತಲ್ಲಿ ಬೇರೆ ಜಾತಿಯವರಿಗೆ ಮೀಸಲು ಕಲ್ಪಿಸಲಾಗಿದೆ. ಕೆಲವು ಕಡೆ ಹಿಂದಿನ ಮೀಸಲಾತಿಯೇ ಮುಂದುವರಿದಿದೆ ಎನ್ನುವ ಆಕ್ಷೇಪಗಳನ್ನು ಕೆಲವರು ಸಲ್ಲಿಸಿದರು.

ಆದರೆ ಆಕ್ಷೇಪ ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯ ಅಂತಿಮ ವಿಚಾರಣೆವರೆಗೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ನಡೆಸದಂತೆ ಆದೇಶ ನೀಡಿತು. ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳದೆ ಮುಂದೂಡಲಾಗಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು ಸಹ ನಿಗದಿಪಡಿಸಲಾಗಿಲ್ಲ. ಹಾಗಾಗಿ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಈವರೆಗೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಹಾಗಾಗಿ ಮಾರ್ಚ್ 9ರೊಳಗೆ ಚುನಾವಣೆ ನಡೆಯುವುದು ಸಾಧ್ಯವಿಲ್ಲ. 

ಈ ಮಧ್ಯೆ ಚುನಾವಣೆ ಆಯೋಗ ಲೋಕಸಭಾ ಚುನಾವಣೆಗೆ ಸಿದ್ದತೆ ಮಾಡುತ್ತಿದೆ. ಫೆಬ್ರವರಿ ಕೊನೆಯೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಮಾರ್ಚ್ ಮಧ್ಯದೊಳಗೆ ಲೋಕಸಭಾ ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಹಾಗಾಗಿ ಮಹಾ ಚುನಾವಣೆ ನಡೆಸಬೇಕಿರುವುದರಿಂದ ಮಹಾನಗರ ಪಾಲಿಕೆ ಮತ್ತಿತರ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ಕೈಗೆತ್ತಿಕೊಳ್ಳುವುದು ಕಷ್ಟ. ಅಧಿಕಾರಿಗಳು ಎರಡೆರಡು ಚುನಾವಣೆಗೆ ತಯಾರಿ ನಡೆಸುವುದು ಅಸಾಧ್ಯ. ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ಮಳೆಗಾಲ ಆರಂಭವಾಗಿರುತ್ತದೆ. 

ಈ ಎಲ್ಲ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯದೆ ಆಡಳಿತಾಧಿಕಾರಿ ನೇಮಿಸುವ ಸಾಧ್ಯತೆಯೇ ಹೆಚ್ಚು. ಒಮ್ಮೆ ಆಡಳಿತಾಧಿಕಾರಿ ನೇಮಕವಾದರೆ ಅವರ ಅಧಿಕಾರಾವಧಿ 6 ತಿಂಗಳಿರುತ್ತದೆ. ಹಾಗಾಗಿ ಸೆಪ್ಟಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಪಾಲಿಕೆ ಚುನಾವಣೆ ನಡೆಯಬಹುದು.

ಈಗಲೆ ಚುನಾವಣೆ ನಡೆಯಬಹುದೆಂದು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅನೇಕರು ಮತದಾರರನ್ನು, ಟಿಕೆಟ್ ಗಿಟ್ಟಿಸಲು ರಾಜಕೀಯ ನಾಯಕರನ್ನು ಓಲೈಸಲು ಈಗಾಗಲೆ ಕಸರತ್ತು ನಡೆಸಿದ್ದರು.  ಅಂತವರೆಲ್ಲ ಇನ್ನೂ 6-8 ತಿಂಗಳು ಕಾಯಲೇಬೇಕಾದದ್ದು ಅನಿವಾರ್ಯವಾಗಬಹುದು. 

 

 

ನ್ಯಾಯಾಲಯ ತೀರ್ಪು ನೀಡುವವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆಸದಂತೆ ಆದೇಶವಿದೆ. ಹಾಗಾಗಿ ನಾವು ಅಂತಹ ಯಾವುದೇ ತಯಾರಿ ಮಾಡಿಲ್ಲ.

-ಶಶಿಧರ ಕುರೇರ, ಮಹಾನಗರ ಪಾಲಿಕೆ ಆಯುಕ್ತ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button