ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೊಡಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ತರಬೇತಿ ಮತ್ತು ನೇಮಕಾತಿ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯಶಸ್ಸಿಗೆ ಧನಾತ್ಮಕ ಚಿಂತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೊಲ್ಲಾಪುರದ ರಾಜಯೋಗಾ ಟೀಚರ್ ಡಾ. ಬಿ. ಕೆ. ರಶ್ಮಿ ಮಾತನಾಡಿ, ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದ ಶೇ.90ರಷ್ಟು ಸಮಯವನ್ನು ಭೂತಕಾಲದಲ್ಲಿಯೇ ಜೀವಿಸುತ್ತಾನೆ. ದೈಹಿಕವಾಗಿ ಉಪಸ್ಥಿತರಿದ್ದರೂ ಮಾನಸಿಕವಾಗಿ ಅಲೆದಾಡುತ್ತಾರೆ. ಜೀವನದಲ್ಲಿ ಗಮ್ಯಸ್ಥಾನಕ್ಕಿಂತ ಪ್ರಯಾಣ ಮುಖ್ಯವಾಗಿದೆ. ಯಶಸ್ಸು ತಾತ್ಕಾಲಿಕ, ಅದನ್ನು ಸ್ಥಿರವಾಗಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಹಿಂದಿನ ಕಾಲದಲ್ಲಿ ವ್ಯಕ್ತಿಯ ಬುದ್ದಿಮತ್ತೆಗೆ ಮಹತ್ವವಿತ್ತು. ಆದರೆ ಇಂದು ಭಾವನಾತ್ಮಕ ಅಂಶ ಪ್ರಮುಖವಾಗಿದೆ. ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನಾವು ಖುಷಿಯಿಂದ ಕಾರ್ಯನಿರ್ವಹಿಸಬೇಕು. ಭವಿಷ್ಯತ್ತಿನ ಬಗ್ಗೆ ಚಿಂತಿಸದೆ, ಭೂತದಲ್ಲಿ ಸಂಭವಿಸಿದ ಘಟನೆಗಳಿಗೆ ಕೊರಗದೆ ವರ್ತಮಾನದಲ್ಲಿ ಬದುಕಿದರೆ ಮಾತ್ರ ಖುಷಿಯಿಂದ ಬದುಕಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಸಿದ್ದರಾಮಪ್ಪ ಇಟ್ಟಿ,
ಇಂದು ಯುವ ಪೀಳಿಗೆ ಚಂಚಲತೆಯಿಂದ ಬಳಲುತ್ತಿದೆ. ಇಂದಿನ ಆಧುನಿಕ ತಾಂತ್ರಿಕ ಯುಗವು ಯುವಪೀಳಿಗೆಗೆ ವರ ಮತ್ತು ಶಾಪವಾಗಿ ಪರಿಣಮಿಸಿದೆ. ಅಂತರ್ಜಾಲದ ಮುಖಾಂತರ ಎಲ್ಲ ಮಾಹಿತಿ ದೊರಕುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣಗಳು ಯುವಕರಲ್ಲಿ ಮಾನಸಿಕವಾಗಿ ವ್ಯಸನಿಗಳಾಗಿಸಿ ಅವರ ಸಾಮರ್ಥ್ಯವನ್ನು ಕುಗ್ಗಿಸಿದೆ ಎಂದರು.
ಯುವಕರು ಅಂತರ್ಜಾಲವನ್ನು ಜಾಣತನದಿಂದ ಬಳಸಬೇಕು. ಮೊಬೈಲ್ ಬಳಕೆ ಸೀಮಿತಗೊಳಿಸಿ ದಿನಾಲೂ ಅರ್ಧ ಗಂಟೆ ಧ್ಯಾನ ಅಭ್ಯಾಸ ಕೈಗೊಳ್ಳುವುದರಿಂದ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಸ್ವಾತಿ ಕುಲಕರ್ಣಿ ಸ್ವಾಗತಿಸಿದರು. ಸೌರಭ ಝುಟ್ಟಿ ಅಥಿತಿಯನ್ನು ಪರಿಚಯಿಸಿದರು. ಪಿ. ಪುಣ್ಯಚರಣ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಪ್ರೊ. ಸಂಜಯ ಅಂಕಲಿ ವಂದಿಸಿದರು.
ಬಿ. ಕೆ. ಮಾಧವಿ, ಪ್ರೊ. ಸಿದ್ದೇಶ ಎಮ್. ಬಿ., ಪ್ರೊ. ಸಚೀನ ಮೆಕ್ಕಳಕಿ, ಪ್ರೊ. ರಿಜ್ವಾನಾ ಬೇಗಮ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ