ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ
ವ್ಯತ್ಯಾಸ ಅಥವಾ ವೈವಿಧ್ಯತೆ ಎನ್ನುವುದು ನಿಸರ್ಗ ನಿಯಮ. ಸಮಾನತೆಯ ಕುರಿತು ಇಂದಿನ ಮಹಿಳೆ ಹೋರಾಡಬೇಕಿಲ್ಲ, ಬದಲಾಗಿ ತನ್ನ ಅಸ್ಥಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಬೇಕಿದೆ. ಸಮಾನತೆ ಏನಿದ್ದರೂ ಶೈಕ್ಷಣಿಕ ಗುಣಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿದೆ. ತಾಯಿ ತನ್ನ ಹೆಣ್ಣು ಮಗಳಿಗೆ ರೆಕ್ಕೆ ಬಿಚ್ಚಿ ಹಾರುವ ಶಕ್ತಿ ದೊರಕಿಸಿಕೊಡಬೇಕಿದೆ. ಇದು ತಂದೆ ಅಥವಾ ಗಂಡಸಿನಿಂದ ಸಾಧ್ಯವಿಲ್ಲ. ಇದೇ ಅವಳ ಮೂಲ ಶಕ್ತಿ. ಇದನ್ನು ಅರಿಯುವಲ್ಲಿ ನಮ್ಮ ಬಹುತೇಕ ಮಹಿಳೆಯರು ವಿಫಲರಾಗಿದ್ದಾರೆ ಎಂದು ಬೆಳಗಾವಿಯ ಭರತೇಶ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್‌ನ ಮಾನವ ಸಂಪನ್ಮೂಲ ವಿಭಾಗದ ಡೀನ್ ಪ್ರೊ. ಸ್ವಾತಿ ಜೋಗ್ ಅಭಿಪ್ರಾಯಪಟ್ಟರು.
ಅವರು ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ’ಪ್ರಸ್ತುತ ವಿದ್ಯಮಾನಗಳಲ್ಲಿ ಭಾರತೀಯ ಮಹಿಳೆಗಿರುವ ಸವಾಲುಗಳು ಮತ್ತು ಅವಕಾಶಗಳು’ ವಿಷಯದ ಕುರಿತು ಮಾತನಾಡಿದರು.
ಸವಾಲುಗಳು ಎನ್ನುವುದಕ್ಕೆ ಅರ್ಥವಿಲ್ಲ, ತನ್ನ ಆಷಾಡಭೂತಿ ಮನೋಸ್ಥಿತಿಯಿಂದ ಹೊರಬರುವ ಮೂಲಕ ತನ್ನ ಆಸಕ್ತಿ ಕ್ಷೇತ್ರವನ್ನು ಸೂಕ್ತ ವೇಳೆಯಲ್ಲಿ ಆಯ್ಕೆಯ ನಿರ್ಧಾರ ತೆಗೆದುಕೊಂಡು ಮುಂದುವರೆದಿದ್ದೆ ಆದರೆ ಮಹಿಳೆಯನ್ನು ಯಾರೂ ತಡೆಯಲಾರರು. ವೈಫಲ್ಯಕ್ಕೆ ಮುಖ್ಯ ಕಾರಣ ಸಿಕ್ಕಿರುವ ಅವಕಾಶಗಳನ್ನು ಕೈ ಚೆಲ್ಲುವುದು ಅಥವಾ ಸಮರ್ಪಕವಾಗಿ ಉಪಯೋಗಿಸಿಕೊಳ್ಳದೇ ಇರುವುದು. ತನ್ನ ಅಂತಶಕ್ತಿಯನ್ನು ಅರಿತು ಒಂದು ವಿಷಯದಲ್ಲಾದರೂ ನೈಪುಣ್ಯತೆ ಹೊಂದಿದರೆ ಯಶಸ್ಸು ಖಂಡಿತ. ಸಮಯ ನಿರ್ವಹಣೆ ಬಹಳ ಪ್ರಮುಖ, ಈ ನಿಮ್ಮ ವಿದ್ಯಾರ್ಥಿ ಜೀವನದ ಸಮಯವನ್ನು ವ್ಯರ್ಥವಾಗದಂತೆ ಕಾಪಾಡಿಕೊಳ್ಳಬೇಕೆಂದರೆ ಆಲಸ್ಯವನ್ನು ತೊರೆಯುವುದೊಂದೇ ಮಾರ್ಗ. ಅಂದರೆ ಮಾತ್ರ ಅಡುಗೆ ಮನೆಯಿಂದ ಹೊರಬಂದು ಜಗತ್ತನ್ನು ನಿಮ್ಮ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂದರು.
ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಚಾರ್ಯ ಡಾ.ಎಮ್.ಬಿ.ಕೋಥಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಮಯೂರಿ ಕಾಮಗೌಡಾ ಸೇರಿದಂತೆ ಮಹಾವಿದ್ಯಾಲಯದ ನಾನಾ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು.
ಅಕ್ಷತಾ ಬಾಡದವರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಡಾ. ಗಂಗಾಬಿಕಾ ಚೌಗಲಾ ಸ್ವಾಗತಿಸಿದರು. ಡಾ. ಎಮ್. ಎಮ್. ಶಂಕರಿಕೊಪ್ಪ ಪರಿಚಯಸಿದರು. ಪ್ರೊ. ಭಕ್ತಿ ಕಮತೆ ನಿರೂಪಿಸಿದರು. ಪ್ರೊ. ಸುವೇದಾ ಕಾಕಡೆ ವಂದಿಸಿದರು