Latest

ಸುವರ್ಣ ಚತುಷ್ಪಥ ನಿರ್ಮಿಸಿದ ಹೆಗ್ಗಳಿಕೆ ವಾಜಪೇಯಿ ಅವರದ್ದು -ಸಿಎಂ


      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ಸಚಿವರಾದ ಸಿ.ಕೆ ಜಾಫರ್ ಷರೀಫ್, ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಎನ್. ಅನಂತಕುಮಾರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವರೂ ಹಾಗೂ ರಾಜ್ಯದ ವಸತಿ ಸಚಿವರೂ ಆಗಿದ್ದ ಚಿತ್ರ ನಟ ಅಂಬರೀಶ್, ರಾಜ್ಯದ ಸಚಿವರಾದ ತಿಪ್ಪೇಸ್ವಾಮಿ, ಈಟಿ ಶಂಭುನಾಥ್, ಓಂಪ್ರಕಾಶ ಕಣಗಲಿ, ವಿಮಲಾಬಾಯಿ ದೇಶಮುಖ್, ಮಾಜಿ ಶಾಸಕರಾದ ಮಲ್ಲಪ್ಪ ವೀರಪ್ಪ ಶೆಟ್ಟಿ, ವಿಶ್ವನಾಥ ಕರಬಸಪ್ಪ ಮಾಮನಿ. ಎಂ.ಪಿ.ರವೀಂದ್ರ, ಬಾಬುರೆಡ್ಡಿ ವೆಂಕಪ್ಪ ತುಂಗಳ, ಹೆಚ್. ಎಸ್.ಪ್ರಕಾಶ ಮತ್ತು ಎಂ. ಭಕ್ತವತ್ಸಲಂ ಅವರಿಗೆ ಸದನ ಸಂತಾಪ ಸೂಚಿಸಿತು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರು ಮಂಡಿಸಿದ ಸಂತಾಪ ಸೂಚನಾ ನಿರ್ಣಯಕ್ಕೆ ಸದಸ್ಯರು ಪಕ್ಷಬೇಧ ಮರೆತು ಬೆಂಬಲಿಸಿದರು.
ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಕಳೆದ ವಿಧಾನ ಮಂಡಲದ ಅಧಿವೇಶನ ಮತ್ತು ಈ ಅಧಿವೇಶನದ ನಡುವೆ ಹಲವು ಮಹನೀಯರು ನಮ್ಮನ್ನು ಅಗಲಿದ್ದಾರೆ. ಅಗಲಿದ ಗಣ್ಯರ ಸ್ಮರಣಾರ್ಥ ಮಂಡಿಸಿರುವ ಸಂತಾಪ ಸೂಚಕ ನಿರ್ಣಯಕ್ಕೆ ದನಿ ಸೇರಿಸುವುದಾಗಿ ತಮ್ಮ ಮಾತು ಆರಂಭಿಸಿ, ಭಾರತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕವಿ ಹೃದಯ ಹೊತ್ತ ಮೇರು ವ್ಯಕ್ತಿತ್ವದ ರಾಜಕಾರಣಿ ಹಾಗೂ ಅಜಾತಶತ್ರುವಾಗಿದ್ದರು ಎಂದು ಬಣ್ಣಿಸಿದರು. ಅಲ್ಲದೆ, ೧೯೭೫ ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದ ವಾಜಪೇಯಿ ಅವರು ೧೯೭೭ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ವಿದೇಶ ಮಂತ್ರಿಯಾಗಿ ಅದ್ಬುತ ಸೇವೆ ಸಲ್ಲಿಸಿದ್ದರು ಎಂದು ತಮ್ಮ ಮನದಾಳದ ಮಾತುಗಳಲ್ಲಿ ಬಣ್ಣಿಸಿದರು.
ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ವಾಜಪೇಯಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ೫೮೦೦ ಕಿ.ಮೀ ಉದ್ದದ ಸುವರ್ಣ ಚತುಷ್ಪಥ ರಸ್ತೆ ನಿರ್ಮಿಸಿದ ಹೆಗ್ಗಳಿಕೆ ವಾಜಪೇಯ ಅವರದ್ದು ಎಂದರು.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಜಾರಿಗೆ ತರುವ ಮೂಲಕ ಹಳ್ಳಿ ಹಳ್ಳಿಗೆ ಸಂಪರ್ಕ ರಸ್ತೆ, ಸರ್ವ ಶಿಕ್ಷಾ ಅಭಿಯಾನದ ಮೂಲಕ ಎಲ್ಲರನ್ನು ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿ ಅವರ ದೂರದೃಷ್ಟಿ ವರ್ಣನಾತೀತ. ೧೯೯೮ರ ಮೇ ತಿಂಗಳಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಜ್ಞಾನಿಗಳ ಆತ್ಮಸ್ಥೈರ್ಯ ವೃದ್ಧಿಸಿ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ಸಾಬೀತು ಪಡಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.
೧೯೯೯ರಲ್ಲಿ ಲಾಹೋರ್‌ಗೆ ಬಸ್ ಸಂಪರ್ಕ ಕಲ್ಪಿಸುವ ಮೂಲಕ ಪಾಕಿಸ್ತಾನದೊಂದಿಗೆ ಸ್ನೇಹ ಬಾಂಧವ್ಯವನ್ನು ಬೆಸೆದ ವಾಜಪೇಯಿ ಅವರು ಪಾಕಿಸ್ತಾನದ ಮಿತ್ರ ದ್ರೋಹಕ್ಕೆ ಕಾರ್ಗಿಲ್ ಯುದ್ಧದ ಮೂಲಕ ತಕ್ಕ ಪಾಠ ಕಲಿಸಿದ ಧೀಮಂತ ವ್ಯಕ್ತಿತ್ವ. ಭಾರತೀಯ ರಾಜಕೀಯ ರಂಗದಲ್ಲಿ ಭೀಷ್ಮ ಪಿತಾಮಹ ಖ್ಯಾತಿಯ ಅಟಲ್ ಜೀ ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೇರು ವ್ಯಕ್ತಿಯನ್ನು ಮಾತ್ರವಲ್ಲದೆ, ಭಾರತ ರತ್ನವನ್ನೇ ಕಳೆದುಕೊಂಡಿದೆ ಎಂದು ಬಣ್ಣಿಸಿದರು.
ಕೇಂದ್ರ ಸಚಿವರಾಗಿದ್ದ ಹೆಚ್. ಎನ್. ಅನಂತಕುಮಾರ್ ಅವರು ರಾಜ್ಯದ ನಾಡು-ನುಡಿ, ನೆಲ-ಜಲ, ಗಡಿ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದ ಸಹೃದಯಿ ಮತ್ತು ಅನುಭವಿ ರಾಜಕಾರಣಿ. ಕೇಂದ್ರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಅವರು, ಕೇಂದ್ರದಲ್ಲಿ ರಾಜ್ಯದ ಧ್ವನಿಯಾಗಿದ್ದರು ಎಂದು ಹೇಳಿದರು.
ವಿಶ್ವಸಂಸ್ಥೆಯ ೬೭ ನೇ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿ, ಕನ್ನಡದ ಕಂಪನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಂಸದೀಯ ಪಟು, ಅಜಾತಶತ್ರು, ಯುವ ನೇತಾರ ಅನಂತಕುಮಾರ್ ಅವರ ನಿಧನದಿಂದ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸಲ್ಲಿಸಿದರು.
ಖ್ಯಾತ ನಟ ಹಾಗೂ ಮಾಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರಾಗಿದ್ದ ಅಂಬರೀಶ್ ಅವರು ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಅಜಾತ ಶತ್ರು, ಕಲಿಯುಗದ ಕರ್ಣ ಮುಂತಾದ ಬಿರುದುಗಳಿಗೆ ಪಾತ್ರರಾಗಿದ್ದರು. ಅಂಬರೀಶ್ ಅವರು ಅನ್ಯಾಯದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದರು. ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಅವರು ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅಂತೆಯೇ, ೧೯೯೮ ರಿಂದ ೨೦೦೪ ರವರೆಗೆ ಸತತ ಮೂರು ಬಾರಿ ಲೋಕಸಭೆಗೆ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅಂಬರೀಶ್ ಅವರು ೨೦೦೬ ರಿಂದ ೨೦೦೮ರ ಅವಧಿಯಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದಾಗ ಕಾವೇರಿ ವಿವಾದ ಉಲ್ಭಣವಾದ ಸಂದರ್ಭದಲ್ಲಿ ನಾಡಿನ ಹಿತಕ್ಕಾಗಿ ಕೇಂದ್ರ ಮಂತ್ರಿ ಪದವಿ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯದ ವಸತಿ ಸಚಿವರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಂಬರೀಶ್ ವಸತಿ-ಹೀನರಿಗೆ ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಅತ್ಯಂತ ಆತ್ಮೀಯರಾಗಿದ್ದ ಅಂಬರೀಶ್ ಅವರ ಅಕಾಲಿಕ ನಿಧನ ತಮಗೆ ವೈಯಕ್ತಿಕವಾಗಿ ಮಾತ್ರವಲ್ಲದೆ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ಕೇಂದ್ರ ಸಚಿವರಾಗಿದ್ದ ಹಿರಿಯ ಮುತ್ಸದ್ದಿ ರಾಜಕಾರಣಿ ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದಾಗ ಕೈಗೊಂಡ ಕಾರ್ಯಕ್ರಮಗಳು ಮಾದರಿಯಾಗಿವೆ. ವಿಶೇಷವಾಗಿ ಕರ್ನಾಟಕದ ರೈಲ್ವೆ ವಲಯಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಮಾಜಿ ಅಬಕಾರಿ ಸಚಿವರಾದ ತಿಪ್ಪೇಸ್ವಾಮಿ, ಮಾಜಿ ಅರಣ್ಯ ಖಾತ್ಯೆ ಸಚಿವ ಈಟಿ ಶಂಭುನಾಥ್, ಮಾಜಿ ಬೃಹತ್ ನೀರಾವರಿ, ಪ್ರವಾಸೋಧ್ಯಮ, ಯುವಜನ ಸೇವಾ ಖಾತೆ ರಾಜ ಸಚಿವರಾಗಿದ್ದ ಓಂಪ್ರಕಾಶ ಕಣಗಲಿ, ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದ ವಿಮಲಾಬಾಯಿ ದೇಶಮುಖ್ ಹಾಗೂ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿ ಮಲ್ಲಪ್ಪ ವೀರಪ್ಪ ಶೆಟ್ಟಿ, ಪರಸಗಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ವಿಶ್ವನಾಥ ಕರಿಬಸಪ್ಪ ಮಾಮನಿ, ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರ
ಮಾಜಿ ಶಾಸಕ ಎಂ.ಪಿ.ರವೀಂದ್ರ, ಬಿಳಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಾಬುರೆಡ್ಡಿ ವೆಂಕಪ್ಪ ತುಂಗಳ, ಹಾಸನ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ಎಚ್. ಎಸ್. ಪ್ರಕಾಶ, ಕೆಜಿಎಫ್ ಮಿಸಲು ಕ್ಷೇತ್ರದ ಮಾಜಿ ಶಾಸಕರಾದ ಎಂ. ಭಕ್ತಾವತ್ಸಲ ಅವರ ಕೊಡುಗೆಯನ್ನು ಮುಖ್ಯಮಂತ್ರಿ ಸದನದಲ್ಲಿ ಸ್ಮರಿಸಿದರು.
ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ. ಕೆ. ಶಿವಕುಮಾರ್, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರೂ ಆದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಶಾಸಕರಾದ ಎನ್.ಮಹೇಶ, ಎಚ್.ಕೆ.ಪಾಟೀಲ ಹಾಗೂ ಶಾಸಕರಾದ ಶಶಿಕಲಾ ಜೋಲ್ಲೆ ಅವರು ಅಟಲ್ ಬಿಹಾರಿ ವಾಜಪೇಯಿ ಒಳಗೊಂ
ಡಂತೆ ಅಗಲಿದ ಗಣ್ಯರ ಗುಣಗಾನ ಮಾಡಿ ಕಂಬನಿ ಮಿಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button